ADVERTISEMENT

ಕಾಲುವೆ ನೀರು ದುರ್ಬಳಕೆ: ಕ್ರಮ ಕೈಗೊಳ್ಳಿ

ತುಂಗಭದ್ರ ಎಡದಂಡೆ ನಾಲೆಯ ಎಡಭಾಗದಲ್ಲಿ ಅಕ್ರಮ: ವರದಿಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 7:20 IST
Last Updated 25 ಜುಲೈ 2020, 7:20 IST

ಸಿಂಧನೂರು: ತುಂಗಭದ್ರ ಎಡದಂಡೆ ನಾಲೆಯ ಎಡಭಾಗದಲ್ಲಿ ಅಕ್ರಮ ನೀರಾವರಿ ಸೌಲಭ್ಯವನ್ನು ಅನೇಕ ರೈತರು ಪಡೆದುಕೊಂಡಿದ್ದು ಕೂಡಲೇ ಅಧಿಕಾರಿಗಳು ವಿದ್ಯುತ್ ಸಂಪರ್ಕ ರದ್ದುಗೊಳಿಸಿ ಅಕ್ರಮ ನೀರಾವರಿಗೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಅವರು ಸೂಚಿಸಿದರು.

ಶುಕ್ರವಾರ ಸ್ಥಳೀಯ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಅನಧಿಕೃತ ನೀರಾವರಿ ಕಡಿವಾಣಕ್ಕೆ ಕುರಿತಂತೆ ಈಗಾಗಲೇ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದಾಗಲೂ ಮುಂದುವರೆದಿದೆ. ಇದನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳ ವೈಫಲ್ಯ ಕಾಣುತ್ತಿದೆ. ಕೂಡಲೇ ಅಕ್ರಮ ನೀರಾವರಿ ತಡೆಯದಿದ್ದರೆ ಅಧಿಕಾರಿಗಳ ವಿರುದ್ಧವೇ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು ಅಧಿಕಾರಿಗಳು ನೀರಾವರಿಗೆ ಮೊದಲ ಆದ್ಯತೆ ನೀಡಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು. ಕೆಲಸ ಮಾಡದ ಅಧಿಕಾರಿಗಳನ್ನು ತೆಗೆದು ಹಾಕಿ ಎಂದು ಸಭೆಯಲ್ಲಿದ್ದ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ADVERTISEMENT

ಅಕ್ರಮ ನೀರಾವರಿ ಕುರಿತಂತೆ ನೀರಾವರಿ ಇಲಾಖೆ ವಿಶೇಷ ಕಾಳಜಿವಹಿಸಿ ಕೆಲಸ ಮಾಡಬೇಕು. ಬಳಸುತ್ತಿರುವ ನೀರಿನ ಮೂಲವನ್ನು ಮೊದಲು ಕಂಡು ಹಿಡಿಯಬೇಕು. ಅಕ್ರಮ ಕಂಡುಬಂದಲ್ಲಿ ಅಂತವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ನೀರಾವರಿ ಇಲಾಖೆಯ ಕಾರ್ಯ ಪಾಲಕ ಅಭಿಯಂತರ ಪ್ರಕಾಶರಾವ್ ಅವರಿಗೆ ಸೂಚನೆ ನೀಡಿದರು.

ಈಗಾಗಲೇ ಅನಧಿಕೃತ ನೀರಾವರಿಗೆ ಬಳಸುತ್ತಿರುವ ವಿದ್ಯುತ್ ಪರಿವರ್ತಕ ಕುರಿತಂತೆ ಪರಿಶೀಲನೆ ನಡೆಸಿ ಹಾಕಿಕೊಂಡಿರುವ ವಿದ್ಯುತ್ ಲೈನ್‍ಗಳನ್ನು ಕಿತ್ತು ಹಾಕಿ, ಮುಖ್ಯ ಕಾಲುವೆಯ ಎಡ ಹಾಗೂ ಬಲಭಾಗದಲ್ಲಿ ಬಳಸುತ್ತಿರುವ ಟ್ರಾನ್ಸ್‌ಫಾರ್ಮರ್‍ಗಳನ್ನು ತೆರವುಗೊಳಿಸಿ. ಉಳಿದಂತೆ ಎಲ್ಲಾ ರೈತರಿಗೆ ನೋಟಿಸ್ ಜಾರಿ ಮಾಡಿ, ರೈತರು ತಾವಾಗಿಯೇ ಲೈನ್‍ಗಳನ್ನು ತೆಗೆದು ಹಾಕದಿದ್ದರೆ ಇಲಾಖೆಯಿಂದಲೇ ಕಿತ್ತು ಒಗೆಯಿರಿ. ಯಾವುದೇ ಪಂಪ್‍ಸೆಟ್‍ಗಳು ಹಾಗೂ ವಿದ್ಯುತ್ ಲೈನ್‍ಗಳು ತಲೆ ಎತ್ತದಂತೆ ನೋಡಿಕೊಳ್ಳಿ ಎಂದು ಜೆಸ್ಕಾಂನ ಸಿಂಧನೂರು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದಾವಲಸಾಬ್, ಕೆಂಚಪ್ಪ ಅವರಿಗೆ ಸೂಚಿಸಿದರು.

ಅಕ್ರಮ ನೀರಾವರಿ ಹಾಗೂ ಬೆಳೆ ಪದ್ಧತಿ ಉಲ್ಲಂಘನೆ ಈಗಾಗಲೇ ರೈತರಿಗೆ ಅನೇಕ ಬಾರಿ ಜಾಗೃತಿ ಹಾಗೂ ತಿಳುವಳಿಕೆ ನೀಡಿದಾಗ್ಯೂ ನಿಯಂತ್ರಣಕ್ಕೆ ಬಾರದೇ ಮುಂದುವರೆದಿದೆ ಎಂದು ಕಿಡಿಕಾರಿದರು.

ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಕ್ರಮ ನೀರಾವರಿ ಮಾಡುವ ಹಾಗೂ ಬೆಳೆ ಪದ್ಧತಿ ಉಲ್ಲಂಘನೆ ಮಾಡುವ ಜಮೀನಿನ ಪಹಣಿಯ 11ನೇ ಕಲಂ ಈ ಬಗ್ಗೆ ಉಲ್ಲೇಖ ಮಾಡಿ ಎಂದು ಸಹಾಯಕ ಆಯುಕ್ತ ರಾಜಶೇಖರ ಡಂಬಳ್ ಹಾಗೂ ತಹಸೀಲ್ದಾರ ಮಂಜುನಾಥ ಭೋಗಾವತಿ ಅವರಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.