ADVERTISEMENT

ಬಾಕಿ ಕಾಮಗಾರಿ ಬೇಗ ಪೂರ್ಣಗೊಳಿಸಿ

ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 2:30 IST
Last Updated 7 ಸೆಪ್ಟೆಂಬರ್ 2022, 2:30 IST
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಸಿಇಒ ಶಶಿಧರ ಕುರೇರ ಮಾತನಾಡಿದರು
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಸಿಇಒ ಶಶಿಧರ ಕುರೇರ ಮಾತನಾಡಿದರು   

ರಾಯಚೂರು: ಜಿಲ್ಲೆಯಲ್ಲಿ ವಿವಿಧ ಯೋಜನೆಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಗಸ್ಟ್ ತಿಂಗಳ ಅಂತ್ಯದವರೆಗೆ ಇಲಾಖಾವಾರು ಸಾಧಿಸಿದ ಪ್ರಗತಿ ಪರಿಶೀಲಿಸಿ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರ, ಕೆಆರ್ ಐಡಿಎಲ್, ಮತ್ತು ಕ್ಯಾಶ್ಯುಟೆಲ್ ಸಂಸ್ಥೆಗಳಿಗೆ ಗುತ್ತಿಗೆ ನೀಡಿದ್ದು, ಇಲಾಖೆಗಳ ಅಧಿಕಾರಿಗಳೇ ಜವಾಬ್ದಾರಿ ವಹಿಸಿ ಕಾಮಗಾರಿಗಳನ್ನು ನಿಗದಿಪಡಿಸಿದ ಅವದಿಯಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ADVERTISEMENT

ಶಾಲಾ ಶಿಕ್ಷಣ ಮತ್ತು ಸಾಕ್ಷರತ್ ಇಲಾಖೆಯ ಉಪ ನಿರ್ದೇಶಕ ಜಿ.ಎಂ.ವೃಷಬೇಂದ್ರಯ್ಯ ಸ್ವಾಮಿ ಮಾತನಾಡಿ, ವಿದ್ಯಾ ವಿಕಾಸ ಯೋಜನೆಯಡಿ ₹ 53.79 ಲಕ್ಷ ವಾರ್ಷಿಕ ಅನುದಾನ ಹಂಚಿಕೆಯಾಗಿದ್ದು, ₹ 22.41 ಲಕ್ಷ ಬಿಡುಗಡೆಯಾಗಿದೆ. ಏಪ್ರಿಲ್‍ನಿಂದ ಆಗಸ್ಟ್‌ವರೆಗೆ ಆರ್ಥಿಕ ಗುರಿ ಸಾಧಿಸಲಾಗಿದೆ ಎಂದು ವಿವರಿಸಿದರು.

ಸಾಮಗ್ರಿಗಳ ಖರೀದಿಗೆ ₹ 47.92 ಲಕ್ಷ ಬಳಕೆಯಾಗಿದೆ. ಸರ್ವ ಶಿಕ್ಷಣ ಅಭಿಯಾನಕ್ಕೆ ಜಿಲ್ಲಾ ಪಂಚಾಯಿತಿ ನಿಧಿಯಿಂದ ₹ 5,561.95 ಲಕ್ಷ ಬಿಡುಗಡೆಯಾಗಿದೆ. ಶೇ 88ರಷ್ಟ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳ ವಿ.ನಾಯಕ ಮಾತನಾಡಿ, ಜಿಲ್ಲೆಯಲ್ಲಿ ಮೂರು ಬಯಲು ರಂಗಮಂದಿರ ನಿರ್ಮಾಣಕ್ಕೆ ಅನುದಾನ ₹ 12ಲಕ್ಷ ಬಿಡುಗಡೆಯಾಗಿದೆ. ದೇವಸುಗೂರು, ಮಸ್ಕಿ ತಾಲ್ಲೂಕಿನ ಹಸಮಕಲ್, ಸಿಂಧನೂರಿನ ಯಾಪಲಪರ್ವಿ, ಮಸ್ಕಿಯ ಮಾಡ ಸಿರವಾರ ದಲ್ಲಿ ಈಗಾಗಲೇ ಎರಡು ಕಡೆ ಸ್ಥಳ ವೀಕ್ಷಣೆ ಮಾಡಿ ಕಾಮಗಾರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನೂ ಒಂದು ಕಾಮಗಾರಿಯಲ್ಲಿ ಸ್ಥಳದ ಸಮಸ್ಯೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಮುಖ್ಯ ಯೋಜನಾ ಅಧಿಕಾರಿ ಡಾ.ಟಿ.ರೋಣಿ, ಮುಖ್ಯ ಲೆಕ್ಕಾಧಿಕಾರಿ ನಾಗರಾಜ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ
ಬಾಬು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.