ADVERTISEMENT

ಪೆಟ್ರೋಲ್ ಬೆಲೆ ಏರಿಕೆ ಕಾಂಗ್ರೆಸ್‌ ಖಂಡನೆ: ಸೈಕಲ್, ಬಂಡಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 16:26 IST
Last Updated 14 ಜುಲೈ 2021, 16:26 IST
ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಸಿಂಧನೂರಿನಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು
ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಸಿಂಧನೂರಿನಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು   

ಸಿಂಧನೂರು: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಹಾಗೂ ಜೋಳ ಖರೀದಿಸಿದ ಬಾಕಿ ಹಣ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕಗಳ ವತಿಯಿಂದ ಬುಧವಾರ ಸ್ಥಳೀಯ ಎಪಿಎಂಸಿ ಗಣೇಶ ದೇವಸ್ಥಾನದಿಂದ ಮಹಾತ್ಮಗಾಂಧಿ ವೃತ್ತದವರೆಗೆ ಸೈಕಲ್ ಮತ್ತು ಜೋಡೆತ್ತಿನ ಬಂಡಿಗಳ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ನಂತರ ಮಿನಿವಿಧಾನಸೌಧ ಮುಂಭಾಗದಲ್ಲಿ ಬಹಿರಂಗ ಸಭೆಯನ್ನುದ್ಧೇಶಿಸಿ ಬಸನಗೌಡ ಬಾದರ್ಲಿ ಮಾತನಾಡಿ ‘ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಅಚ್ಛೇದಿನ್ ಹೆಸರಿನಲ್ಲಿ ಕೆಟ್ಟ ದಿನಗಳನ್ನು ತಂದಿದ್ದಾರೆ. ಕೊಟ್ಟ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಬರೀ ಹುಸಿ ಭರವಸೆಗಳೊಂದಿಗೆ ಜನರನ್ನು ಮೋಡಿ ಮಾಡುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಧಿಕ ತೆರಿಗೆ ವಿಧಿಸಿದ್ದರಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ನೂರರ ಗಡಿ ದಾಟಿದೆ. ಕೋವಿಡ್‍ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಲೆ ಏರಿಕೆಯು ಜನಸಾಮಾನ್ಯರ ಬದುಕನ್ನು ಮತ್ತಷ್ಟು ದುಸ್ತರವಾಗಿಸಿದೆ’ ಎಂದು ಟೀಕಿಸಿದರು.

ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ, ‘ಅದಾನಿ, ಅಂಬಾನಿಯಂತಹ ಶ್ರೀಮಂತರು ಹಾಗೂ ಕಾರ್ಪೋ
ರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ರೈತ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿರುವ ಬಿಜೆಪಿ ಸರ್ಕಾರ ಹೀಗೆಯೇ ಮುಂದುವರೆದರೆ ಬಡವರು, ಮಧ್ಯಮ ವರ್ಗದವರಿಗೆ ಉಳಿಗಾಲವಿಲ್ಲ. ಮುಂಬರುವ ವಿಧಾ
ನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮೋದಿ ಸರ್ಕಾ
ರಕ್ಕೆ ತಕ್ಕ ಪಾಠ ಕಲಿಸಬೇಕು. ಜೊತೆಗೆ ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ
ಗಳನ್ನು ಗೆಲ್ಲಿಸಿ ಕೈ ಬಲಪಡಿಸಬೇಕು’ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನಿರ್ಮಲಾ ಬೆಣ್ಣೆ ಮಾತನಾಡಿ ‘ಹೆಂಡತಿ, ಮಕ್ಕಳು ಮತ್ತು ಸಂಸಾರ ಇಲ್ಲದ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಮಾಡಿದ ಹಿನ್ನೆಲೆಯಲ್ಲಿ ಜನರು ಸಂಕಷ್ಟದ ದಿನಗಳನ್ನು ಎದುರಿಸುವಂತಾಗಿದೆ. ದೇಶ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ, ಆರ್ಥಿಕ ಪರಿಸ್ಥಿತಿ ಅಧೋಗತಿಯತ್ತ ಸಾಗಿದೆ ಎಂದರು.

ಶಿರಸ್ತೇದಾರ್ ಮನವಿ ಪತ್ರ ಸ್ವೀಕರಿಸಿದರು. ಕಾಂಗ್ರೆಸ್ ಮುಖಂಡರಾದ ಎಚ್.ಎನ್.ಬಡಿಗೇರ್, ಶಿವಕುಮಾರ ಜವಳಿ ಮಾತನಾಡಿದರು. ಮುಖಂಡರಾದ ಸೋಮನಗೌಡ ಬಾದರ್ಲಿ, ವೆಂಕಟೇಶ ರಾಗಲಪರ್ವಿ, ಖಾಜಾಹುಸೇನ್ ರೌಡಕುಂದಾ, ಚನ್ನಬಸವ ಉಪ್ಪಳ, ಶರಣಯ್ಯ ಕೋಟೆ, ದ್ರಾಕ್ಷಾಯಿಣಿ, ಚನ್ನಪ್ಪ ಕುಂಬಾರ, ಅಮರೇಗೌಡ ಬಾಗೋಡಿ, ನಾಗರಾಜ್ ಕವಿತಾಳ, ಹನುಮೇಶ ಬಾಗೋಡಿ, ಮಲ್ಲಯ್ಯ ಮ್ಯಾಕಲ್, ರಾಮಣ್ಣ ಬೆಳಗುರ್ಕಿ, ಆದಿಶೇಷ ಮೇಸ್ತ್ರಿ, ನೂರ್ ಅಹ್ಮದ್, ವೀರರಾಜು ಜಿ, ನಿರುಪಾದಿ ದೇವಿಕ್ಯಾಂಪ್, ಪ್ರಭು ಅಮರಾಪುರ, ಮುದಿಯಪ್ಪ ಡೈಮಂಡ್, ಶಂಕ್ರಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.