ADVERTISEMENT

ವಿಬಿ ಜಿ ರಾಮ್‌ ಜಿ ಕಾಯ್ದೆ ವಾಪಸ್ ಪಡೆಯಿರಿ: ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 5:23 IST
Last Updated 22 ಜನವರಿ 2026, 5:23 IST
ರಾಯಚೂರಿನ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿದರು
ರಾಯಚೂರಿನ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿದರು   

ರಾಯಚೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಯನ್ನು ದುರ್ಬಲಗೊಳಿಸಿ ಹೊಸದಾಗಿ ರೂಪಿಸಿರುವ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ತಕ್ಷಣ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರ ಮಹಾತ್ಮ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಕೆಪಿಸಿಸಿ ಕಾರ್ಯಾರ್ಧಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಜಿ.ವಸಂತಕುಮಾ‌ರ ಮಾತನಾಡಿ,‘ಮನರೇಗಾದಲ್ಲಿನ ಬದಲಾವಣೆಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಳ್ಳಲಿವೆ. ಕಾಂಗ್ರೆಸ್ ಸರ್ಕಾರ ಜನರಿಗೆ ಉದ್ಯೋಗದ ಹಕ್ಕು ನೀಡಿತ್ತು. ಆದರೆ, ಬಿಜೆಪಿ ಅದನ್ನು ಕಸಿದುಕೊಂಡು ಜನರನ್ನು ಜೀತದಾಳುಗಳಂತೆ ಕಾಣುವ ಮನಸ್ಥಿತಿ ತೋರಿಸುತ್ತಿದೆ’ ಎಂದು ಟೀಕಿಸಿದರು.

‘ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್‌ ಅಂದೋಲನ ನಡೆಸುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ದೇಶವ್ಯಾಪಿ ಹೋರಾಟ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಗ್ರಾಮ, ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿಯೂ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

ADVERTISEMENT

ಸಂಸದ ಜಿ.ಕುಮಾರ ನಾಯಕ ಮಾತನಾಡಿ,‘ಗ್ರಾಮೀಣ ಭಾಗದ ಬಡ ಜನರಿಗೆ ಕನಿಷ್ಠ ಉದ್ಯೋಗ ಭದ್ರತೆ ಒದಗಿಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ನರೇಗಾ ಯೋಜನೆಯನ್ನು ಜಾರಿಗೊಳಿಸಿತ್ತು. ಆದರೆ, ಬಿಜೆಪಿ ಸರ್ಕಾರ ಹೊಸ ಕಾಯ್ದೆ ಮೂಲಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿದ್ದ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ’ ಎಂದು ಆರೋಪಿಸಿದರು.

‘ಹೊಸ ಕಾಯ್ದೆ ಜನವಿರೋಧಿ ಮತ್ತು ಬಡವರ ಬದುಕಿಗೆ ಮಾರಕವಾಗಿದೆ. ಆದ್ದರಿಂದ ಅದನ್ನು ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ ನೇತೃತ್ವ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ಮಹಮ್ಮದ್ ಶಾಲಂ, ಅಸ್ಸಾಂ ಪಾಷಾ, ಶ್ರೀದೇವಿ ನಾಯಕ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ರಜಾಕ್ ಉಸ್ತಾದ್, ರವಿ ಪಾಟೀಲ, ಎಪಿಎಂಸಿ ಅಧ್ಯಕ್ಷ ಜಯಂತರಾವ್ ಪತಂಗೆ, ಮಲ್ಲಿಕಾರ್ಜುನಗೌಡ ತಲಮಾರಿ, ಉಪಾಧ್ಯಕ್ಷ ಬಷೀರ್ ಅಹ್ಮದ್, ಗಿಲ್ಲೆಸೂಗೂರು ಬ್ಲಾಕ್‌ ಅಧ್ಯಕ್ಷೆ ಉರುಕುಂದಪ್ಪ ಮಟಮಾರಿ, ಸಿಂಡಿಕೇಟ್ ಸದಸ್ಯರಾದ ಚನ್ನಬಸವ, ಪವನ್ ಪಾಟೀಲ, ರಾಮಣ್ಣ ಇರಬಗೇರಾ, ಅಯ್ಯಪ್ಪಸ್ವಾಮಿ ಜಾಲಹಳ್ಳಿ, ಪರಿಶಿಷ್ಟ ಜಾತಿ ವಿಭಾಗದ ನಗರ ಅಧ್ಯಕ್ಷ ವಿಶ್ವನಾಥ ಪಟ್ಟಿ, ವಿಜಯ ಪ್ರಕಾಶ, ವೆಂಕಟೇಶ್ ಅರಳಿಕರ್, ಪಾರ್ಥಸಾರಥಿ, ಪರಶುರಾಮಲು, ಸುರೇಶ್ ಪಟ್ಟಿ, ನಾಗೇಶ್ವರರಾವ್, ನರಸಿಂಹಲು ರಾಂಪುರ, ಸತೀಶ್, ಉಮೇಶ್, ರಮೇಶ್, ಚಿನ್ನ ರಾಯುಡು, ಸಿದ್ದಪ್ಪ ರಾಂಪುರ, ಮುದ್ದುಕೃಷ್ಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.