
ಸಿರವಾರ: ‘ಹಿಂದುಳಿದ ಸಮಾಜಗಳು ಅಭಿವೃದ್ದಿಯಾಗಬೇಕೆಂದರೆ ಹೋರಾಟ ಮಾಡಿಯೇ ಹಕ್ಕುಗಳನ್ನು ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಚಿತ್ತಾಪುರ ತಾಲ್ಲೂಕಿನ ಕರದಾಳದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೈಗೊಂಡಿರುವ ಈಡಿಗ–ಬಿಲ್ಲವ ಸಮಾಜದ 700 ಕಿ.ಮೀ ಪಾದಯಾತ್ರೆ ಪಟ್ಟಣಕ್ಕೆ ಆಗಮಿಸಿದ ವೇಳೆ ಅವರು ಮಾತನಾಡಿದರು.
‘26 ಪಂಗಡಗಳನ್ನು ಹೊಂದಿರುವ ಸಮಾಜದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿ ರುವ ಪಾದಯಾತ್ರೆಯು ಚಿತ್ತಾಪುರ ತಾಲ್ಲೂಕಿನ ಕರದಾಳದ ಪೀಠದಿಂದ ಪ್ರಾರಂಭವಾಗಿದ್ದು, ರಾಜ್ಯದ ಪ್ರಮುಖ 8 ಜಿಲ್ಲೆಗಳ ಮುಖಾಂತರ ರಾಜಧಾನಿ ಬೆಂಗಳೂರು ತಲುಪಲಿದೆ. ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ’ ಎಂದರು.
‘ಹಿಂದುಳಿದ ವರ್ಗಗಳ ಹೆಸರು ಬಳಸಿಕೊಂಡು ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಮ್ಮ ಸಮಾಜವನ್ನು ಕಡೆಗಣಿಸುತ್ತಿದೆ. ರಾಜಕೀಯ ದುರುದ್ದೇಶದಿಂದ ಸಮಾಜದ ಕುಲಕಸಬು ಕಸಿದುಕೊಂಡು, ಕುಟುಂಬಗಳನ್ನು ಬೀದಿಗೆ ತಂದಿದೆ’ ಎಂದು ಹೇಳಿದರು.
ಗುರುವಾರ ಸಂಜೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಾದಯಾತ್ರೆ ತಂಡವನ್ನು ಮಹಿಳೆಯರ ಕುಂಭ–ಕಳಸ, ಡೊಳ್ಳು ಕುಣಿತ, ಬಾಜಾ–ಭಜಂತ್ರಿಯೊಂದಿಗೆ ಸಮಾಜದ ಮುಖಂಡರು ಸ್ವಾಗ ತಿಸಿದರು.
ಮುಖ್ಯರಸ್ತೆಯುದ್ದಕ್ಕೂ ಯುವಕರ ನೃತ್ಯ, ಹಾಡುಗಳಿಂದ ಮೆರವಣಿಗೆ ಮೂಲಕ ಪಾದಯಾತ್ರೆ ಮುಂದೆ ಸಾಗಿತು.
ಶುಕ್ರವಾರ ಬೆಳಿಗ್ಗೆ ಪಟ್ಟಣದಿಂದ ಹಳ್ಳಿ ಹೊಸೂರು ಕಡೆಗೆ ಪಾದಯಾತ್ರೆ ಸಾಗಿತು.
ಸಮಾಜದ ಜಿಲ್ಲಾ ಘಟಕದ ಉಪಾಧ್ಯಕ್ಷ ಅಶೋಕ ಗುತ್ತೇದಾರ ಚಾಗಭಾವಿ, ತಾಲ್ಲೂಕು ಘಟಕದ ಅಧ್ಯಕ್ಷ ರಾಮನಗೌಡ ದೇವತಗಲ್, ಉಪಾಧ್ಯಕ್ಷ ಕೆ.ಶ್ರೀನಿವಾಸ ಕಡದಿನ್ನಿ ಕ್ಯಾಂಪ್, ಧನಂಜಯಗೌಡ ಹೀರಾ, ಜಂಬಣ್ಣ ಗಣದಿನ್ನಿ, ಶಿವಪುತ್ರಗೌಡ, ಲಕ್ಷ್ಮಣ ಮುಚ್ಚಳಗುಡ್ಡ ಕ್ಯಾಂಪ್ ಸೇರಿದಂತೆ ವಿವಿಧ ಹಿಂದುಳಿದ ಸಮಾಜಗಳ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.