ADVERTISEMENT

ಡಿ.ಕೆ.ಶಿವಕುಮಾರ ಬಂಧನ ಖಂಡಿಸಿ ಪ್ರತಿಭಟನೆ

ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 12:12 IST
Last Updated 4 ಸೆಪ್ಟೆಂಬರ್ 2019, 12:12 IST
ರಾಯಚೂರಿನಲ್ಲಿ ಬುಧವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಸದಸ್ಯರು ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ ಬುಧವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಸದಸ್ಯರು ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದರು   

ರಾಯಚೂರು: ಶಾಸಕ ಡಿ.ಕೆ.ಶಿವಕುಮಾರ ಅವರನ್ನು ವಿನಾಕಾರಣ ಇ.ಡಿ.ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ನೇತೃತ್ವದಲ್ಲಿ ಪಕ್ಷದ ಸದಸ್ಯರು ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬುಧವಾರ ಪ್ರತಿಭಟನೆ ನಡೆಸಿದರು.

ವಿಚಾರಣೆಗೆ ಸಹಕರಿಸಿಲ್ಲ ಎಂದು ಆರೋಪಿಸಿದ ಅಧಿಕಾರಿಗಳು, ಡಿ.ಕೆ.ಶಿವಕುಮಾರ ಅವರನ್ನು ರಾಜಕೀಯ ಪ್ರೇರಿತವಾಗಿ ಬಂಧನ ಮಾಡಿದ್ದಾರೆ. ಕೇಂದ್ರ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡು ತನಿಖಾ ಸಂಸ್ಥೆಗಳ ಮೂಲಕ ಬಿಜೆಪಿಯೇತರ ಪಕ್ಷಗಳ ನಾಯಕರಿಗೆ ಕಿರುಕುಳ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಲ್ಕು ದಿನಗಳಿಂದ ವಿಚಾರಣೆ ನಡೆಸುತ್ತಿದ್ದ ಇಡಿ ಅಧಿಕಾರಿಗಳಿಗೆ ಡಿ.ಕೆ.ಶಿವಕುಮಾರ ಸಮರ್ಪಕವಾಗಿ ಉತ್ತರ ನೀಡಿದರೂ, ಅಧಿಕಾರಿಗಳು ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಬಂಧನ ಮಾಡಿರುವುದರ ಹಿಂದೆ ಬಿಜೆಪಿ ಕೈವಾಡವಿದೆ ಎಂದು ದೂರಿದರು.

ADVERTISEMENT

ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸೇಡಿನ ರಾಜಕಾರಣ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ಇಂತಹ ಕ್ರಮಗಳನ್ನು ಕೈಬಿಟ್ಟು, ಬಂಧನ ಮಾಡಿರುವ ಡಿ.ಕೆ.ಶಿವಕುಮಾರ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಕೆ.ಶಾಂತಪ್ಪ, ಅಮರೇಗೌಡ ಹಂಚಿನಾಳ, ಸುಧೀಂದ್ರ ಜಾಗೀರದಾರ, ಜಿ.ಶಿವಮೂರ್ತಿ, ಹನುಮಂತ ಜೂಕೂರು, ಆಂಜನೇಯ ಕುರುಬದೊಡ್ಡಿ, ಅಸ್ಲಂಪಾಷ, ಜಿ.ಸುರೇಶ, ನಿರ್ಮಲಾ ಬೆಣ್ಣೆ, ಶ್ರೀದೇವಿ ರಾಜಶೇಖರ ನಾಯಕ, ರಂಜಿತಾ ಹೀರಾ, ಸಾಜೀದ ಸಮೀರ, ಬಸವರಾಜ ಅತ್ತನೂರು, ರಾಮಕೃಷ್ಣ ನಾಯಕ, ಬಸವರಾಜ, ಮಹ್ಮದ್ ರಿಯಾಜ್, ರಾಣಿ ರಿಚರ್ಡ್‌, ವಂದನಾ, ಶಶಿಕಲಾ ಭೀಮರಾಯ, ಶ್ರೀನಿವಾಸ ಪೋತಗಲ್, ನರಸಿಂಹನಾಯಕ, ಶ್ರೀಧರರೆಡ್ಡಿ, ಮಲ್ಲಿಕಾರ್ಜುನ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.