ಲಿಂಗಸುಗೂರು: ‘ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕಡೆಗಣನೆ ಮಾಡುತ್ತಿದ್ದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಮಹಿಳಾ ಘಟಕಗಳ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾಡಿದರು.
‘ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆಯಲ್ಲಿ ಸಂಪೂರ್ಣ ಹಿನ್ನಡೆಯಾಗಿರುವ ಬಗ್ಗೆ ಮಾಹಿತಿ ಪಡೆದ ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಪಕ್ಷ ಸಂಘಟನೆಗೆ ಆದೇಶ ಮಾಡಿದ್ದರಿಂದ ಪಕ್ಷ ಸಂಘಟಿಸಿ ಕಾರ್ಯಕರ್ತರಿಗೆ ಶಕ್ತಿ ತುಂಬವ ಕೆಲಸ ಮಾಡುತ್ತಿದ್ದೇನೆ’ ಎಂದರು.
‘ವಿಧಾನ ಪರಿಷತ್ ಚುನಾವಣೆಯಲ್ಲಿ ಆಗ ಶಾಸಕರಾಗಿದ್ದ ಹೂಲಗೇರಿ ಅವರಿಗೆ ಕೇಳಿದಷ್ಟು ಹಣ ಕೊಟ್ಟಿದ್ದೇನೆ. ಆದರೂ ನಮ್ಮ ಪರವಾಗಿ ಕೆಲಸ ಮಾಡಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸ್ವಯಂಕೃತ ಅಪರಾಧಗಳಿಂದ ಸೋತಿರುವ ಹೂಲಗೇರಿ ನಮ್ಮ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಗೆದ್ದಾಗ ನನ್ನ ಶಕ್ತಿಯಿಂದ ಗೆದ್ದೆ, ಸೋತಾಗ ಬಯ್ಯಾಪುರ ಕುತಂತ್ರದಿಂದ ಸೋತೆ ಎನ್ನುವ ಮನೋಭಾವ ಹೂಲಗೇರಿ ಅವರದಾಗಿದೆ’ ಎಂದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಡಿ.ಜಿ. ಗುರಿಕಾರ, ಗುಂಡಪ್ಪ ನಾಯಕ, ಪ್ರಮೋದ ಕುಲಕರ್ಣಿ, ಅಮರೇಶ ನಾಡಗೌಡ, ಅನೀಸ್ ಪಾಷ, ಆದಪ್ಪ ಮನಗೂಳಿ, ಲಾಲಪ್ಪ, ಲಿಂಗಪ್ಪ ಪರಂಗಿ, ಮಲ್ಲಯ್ಯ ನರಕಲದಿನ್ನಿ, ಪ್ರಕಾಶ ಕುರಿ, ಜಗನ್ನಾಥ, ಶ್ರೀಕಾಂತ ಪಾಟೀಲ, ಸೋಮಶೇಖರ ಐದನಾಳ, ಲಕ್ಷ್ಮಿದೇವಿ, ನಾಗವೇಣಿ, ಎಂ.ಜಿಲಾನಿ, ವಿಜಯಕುಮಾರ ಕಾಳಾಪೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.