
ರಾಯಚೂರು: ಕೋಟೆ ಕಂದಕದಲ್ಲಿನ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿನ ಸಂಚಾರ ಒತ್ತಡ ಕಡಿಮೆ ಮಾಡುವ ದಿಸೆಯಲ್ಲಿ ರಾಯಚೂರು ಜಿಲ್ಲಾಡಳಿತ ದಿಟ್ಟ ಹೆಜ್ಜೆ ಇಟ್ಟಿದೆ.
ನಗರ ಸೌಂದರ್ಯೀಕರಣವನ್ನು ಗಮನದಲ್ಲಿ ಇಟ್ಟುಕೊಂಡು ಈಗಾಗಲೇ ಕೋಟೆ ಕಂದಕದಲ್ಲಿನ ಹೂಳು ತೆಗೆದು ಹಾಕಲಾಗಿದೆ. ರಾಜ್ಯ ಪುರಾತತ್ವ ಇಲಾಖೆಯು ಸಹ ಕೋಟೆ ಗೋಡೆಗಳನ್ನು ದುರಸ್ತಿಪಡಿಸಿ ಅವುಗಳನ್ನು ಬಲಪಡಿಸಿದೆ. ಸ್ಮಾರಕಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಅಭಿವೃದ್ಧಿ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಹಸಿರು ನಿಶಾನೆ ತೋರಿಸಿದೆ.
ಮಹಾನಗಪಾಲಿಕೆ ಅಧಿಕಾರಿಗಳು ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿಗಳೊಂದಿಗೆ ಸುಧೀರ್ಘ ಸಮಾಲೋಚನೆ ನಡೆಸಿ ಅಭಿವೃದ್ಧಿಗೆ ಅನುವು ಮಾಡಿಕೊಟ್ಟಿದ್ದಾರೆ. ಜಿಲ್ಲಾಡಳಿತವು ಮಹಾನಗರಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಭಿವೃದ್ಧಿ ಕಾಮಗಾರಿಗೆ ಮುನ್ನುಡಿ ಬರೆದಿದೆ.
ಜುಲೈನಲ್ಲಿ ಜಿಲ್ಲಾಧಿಕಾರಿ ನಿತೀಶ್ ಅವರು ದಲಿತ ಸಂಘಟನೆಗಳ ಪ್ರಮುಖರ ಸಭೆ ಕರೆದು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಡಾ.ಅಂಬೇಡ್ಕರ್ ವೃತ್ತದ ಅಭಿವೃದ್ಧಿಯ ಪ್ರಾತ್ಯಕ್ಷಿಕೆಯ 3ಡಿ ವಿನ್ಯಾಸದ ಪ್ರಾತ್ಯಕ್ಷಿಕೆ ನೀಡಿದ್ದರು. ಎಲ್ಲರೂ ಒಪ್ಪಿಗೆ ಸೂಚಿಸಿದ ನಂತರ ಇದೀಗ ಕಾಮಗಾರಿ ಆರಂಭಿಸಲಾಗಿದೆ.
‘ಡಾ.ಅಂಬೇಡ್ಕರ್ ವೃತ್ತ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆತಿದೆ. ಕಂದಕದ ಒಂದು ಬದಿ ಸಮತಟ್ಟುಗೊಳಿಸಿ ವೀವ್‍ಪಾಯಿಂಟ್ ನಿರ್ಮಿಸಲಾಗುವುದು. ಸದ್ಯ ಇರುವ ವೃತ್ತ ಮಧ್ಯ ಭಾಗದಲ್ಲಿ ಇಲ್ಲ. ಹೀಗಾಗಿ ರೇಖಾಗಣಿತದ ಮೂಲಕ ಅದಕ್ಕೊಂದು ಸರಿಯಾದ ಸ್ಥಾನ ಗುರುತಿಸಲಾಗಿದೆ. ಅದಕ್ಕೆ ಪೂರಕವಾಗಿ ಕೋಟೆ ಪಕ್ಕದಲ್ಲಿ ಗ್ರೀನ್ ಪಾರ್ಕ್ ನಿರ್ಮಾಣಗೊಳ್ಳಲಿದೆ’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಮಹೇಶ ತಿಳಿಸಿದರು.
‘ಕೋಟೆ ಬದಿಯಲ್ಲಿ ಸಂವಿಧಾನ ಪ್ರತಿಕೃತಿ ನಿರ್ಮಿಸಲಾಗುವುದು. ಅದರ ಕಾಮಗಾರಿ ಪೂರ್ಣಗೊಂಡ ನಂತರ ಡಾ.ಅಂಬೇಡ್ಕರ್ ಪ್ರತಿಮೆಯ ತೋರು ಬೆರಳು ಸಂವಿಧಾನದ ಕಡೆಗೆ ಇರುವಂತೆ ಕಾಣಲಿದೆ. ಈಗಾಗಲೇ ನೀಲನಕ್ಷೆ ಸಿದ್ಧಪಡಿಸಿ ಒಪ್ಪಿಗೆ ಪಡೆಯಲಾಗಿದೆ’ ಎಂದು ಹೇಳಿದರು.
‘ಕೆಲ ಮಾಧ್ಯಮಗಳು ತಪ್ಪು ಗ್ರಹಿಕೆಯಿಂದಾಗಿ ಮಹಾನಗರಪಾಲಿಕೆಯು ಕಂದಕವನ್ನು ಕಿರಿದುಗೊಳಿಸುತ್ತಿವೆ ಎಂದು ಪ್ರಕಟಿಸಿವೆ. ವಾಸ್ತವಾದಲ್ಲಿಕೋಟೆ ಪಕ್ಕದಲ್ಲಿನ ಅಭಿವೃದ್ಧಿ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಕೈಗೊಳ್ಳುತ್ತಿದೆ‘ ಎಂದು ಮಹಾನಗರಪಾಲಿಕೆಯ ಕಿರಿಯ ಎಂಜಿನಿಯರ್ ಮಲಿಕ್ ಸ್ಪಷ್ಟಪಡಿಸಿದರು.
ವತ್ತದಲ್ಲಿ ಏನಿರಲಿದೆ?
ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಇನ್ನು ಟ್ರಾಫಿಕ್ ಸಿಗ್ನಲ್‌ಗಳು ಇರುವುದಿಲ್ಲ. ವೃತ್ತ ಗೋಲಾಕಾರದಲ್ಲಿ ವಿಸ್ತರಣೆಗೊಳ್ಳಲಿದೆ. ವಾಹನ ಬಂದರೂ ಗೋಲಾಕಾರದಲ್ಲಿ ಸಂಚರಿಸಿ ಸುಲಭವಾಗಿ ತಾನು ಹೋಗಬೇಕಿರುವ ಮಾರ್ಗದಲ್ಲಿ ಸಾಗಲಿದೆ.
ಕೋಟೆ ಮುಂಭಾಗದಲ್ಲಿ 180 ಅಗಲ ಕಂದಕದಲ್ಲಿ ಈಗಾಲೇ ಗಟ್ಟಿ ಮಣ್ಣು ಹಾಕಿ ಪಕ್ಕದಲ್ಲಿ ಕಾಂಕ್ರೀಟ್ ತಡೆ ಗೋಡೆ ಹಾಗೂ ಗ್ರೀನ್ ನಿರ್ಮಾಣವಾಗಲಿದೆ. ಕೊಳಚೆ ನೀರು ಪಕ್ಕದಲ್ಲಿ ತನ್ನ ಪಾಡಿಗೆ ಹರಿದು ಹೋಗಲಿದೆ. ಸಮತಟ್ಟುಗೊಳಿಸಿದ ಜಾಗದಲ್ಲಿ ಡಾ.ಅಂಬೇಡ್ಕರ್ ಅವರ ಬದುಕಿನ ಗಾಥೆಯ ಸಂಕ್ಷಿಪ್ತ ಮಾಹಿತಿ, ಪುತ್ಥಳಿ, ಪಾರ್ಲಿಮೆಂಟ್ ಮತ್ತು ಸಂವಿಧಾನ ಗ್ರಂಥದ ಮಾದರಿ ನಿರ್ಮಾಣಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.