ಮಸ್ಕಿ: ‘ಕ್ಷೇತ್ರದಲ್ಲಿ ಅರೆಬರೆ ಕಾಮಗಾರಿ ಮಾಡಿ ಕೈ ತೊಳೆದುಕೊಳ್ಳುತ್ತಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಅರ್.ಬಸನಗೌಡ ತುರ್ವಿಹಾಳ ಸೂಚಿಸಿದರು.
ತಾಲ್ಲೂಕಿನ ಮಾರಲದಿನ್ನಿ ಬಳಿಯ ಮಸ್ಕಿ ಜಲಾಶಯದ ಬಳಿ ಮಂಗಳವಾರ ನಡೆದ ತಾಲ್ಲೂಕು ಅಭಿವೃದ್ಧಿ ಕಾರ್ಯಗಳ ತ್ರೈಮಾಸಿಕ (ಕೆಡಿಪಿ) ಸಭೆಯಲ್ಲಿ ಮಾತನಾಡಿದರು.
‘ಕ್ಷೇತ್ರದಲ್ಲಿ ಅನೇಕ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಕೆಲ ಕಡೆ ನಿರ್ಮಿಸಿದ ಮೂರು ದಿನಗಳಲ್ಲಿಯೇ ರಸ್ತೆ ಕಿತ್ತುಕೊಂಡು ಹೋಗಿದೆ. ಅಧಿಕಾರಿಗಳು ಅವರ ಇಎಂಡಿ ಹಾಗೂ ಎಫ್‌ಎಸ್‌ಡಿ ಜಪ್ತಿ ಮಾಡಬೇಕು. ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕು’ ಎಂದು ಪಂಚಾಯತ್ ರಾಜ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
‘ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿನಿತ್ಯ ಶಾಲೆಗಳಿಗೆ ಭೇಟಿ ನೀಡಬೇಕು. ಹಾಜರಾತಿ ಹೆಚ್ಚಳ ಹಾಗೂ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದರು.
ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ ಹಾಗೂ ಅರಣ್ಯ ಇಲಾಖೆಗಳ ಯೋಜನೆಯ ಪ್ರಗತಿ ಕುರಿತು ಚರ್ಚಿಸಲಾಯಿತು.
ತಹಶೀಲ್ದಾರ್ ಮಂಜುನಾಥ ಎಂ.ಭೋಗಾವತಿ, ತಾಲ್ಲೂಕು ಪಂಚಾಯಿತಿ ಇಒ ಅಮರೇಶ ಯಾದವ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೈಬೂಸಾಬ್, ಕೆಡಿಪಿ ಸಮಿತಿ ನಾಮನಿರ್ದೇಶಿತ ಸದಸ್ಯರು ಹಾಗೂ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಬಹುತೇಕ ಅಧಿಕಾರಿಗಳು ತಮ್ಮ ತಮ್ಮ ತಾಲ್ಲೂಕು ನೋಡಿಕೊಳ್ಳತ್ತಿದ್ದೀರಿ. ಮಸ್ಕಿ ತಾಲ್ಲೂಕು ಮರೆತು ಬಿಟ್ಟಿದ್ದೀರಿ. ಮಸ್ಕಿ ತಾಲ್ಲೂಕಿಗೆ ನಿಮ್ಮ ತಾಲ್ಲೂಕಿನ ಹಳ್ಳಿಗಳೂ ಬರುತ್ತವೆ ಎಂಬುದು ಗಮನದಲ್ಲಿರಲಿ.– ಆರ್.ಬಸನಗೌಡ ತುರ್ವಿಹಾಳ, ಶಾಸಕ
ಗುತ್ತಿಗೆ ವೈದ್ಯರಿಗೆ ಎಚ್ಚರಿಕೆ
ಗುತ್ತಿಗೆ ಆಧಾರದ ಮೇಲೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ನಿಯುಕ್ತಿಗೊಂಡ ವೈದ್ಯರು ಸರಿಯಾಗಿ ಕೆಲಸಕ್ಕೆ ಹಾಜರಾಗಬೇಕು. ಕೆಲಸ ಮಾಡೋಕೆ ಆಗುವುದಿಲ್ಲ ಎಂದರೆ ಬಿಟ್ಟು ಬಿಡಲು ಹೇಳಿ ಬೇರೆ ವೈದ್ಯರನ್ನು ತೆಗೆದುಕೊಳ್ಳುತ್ತೇವೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ತಾಲ್ಲೂಕು ಆರೋಗ್ಯಾಧಿಕಾರಿ ಅಮರೇಶ ಪಾಟೀಲ ಹೇಳಿದರು. ಸಭೆಯಲ್ಲಿ ಹಾರಿಕೆಯ ಉತ್ತರ ನೀಡುವುದನ್ನು ಬಿಟ್ಟು ಸರಿಯಾಗಿ ಕೆಲಸ ಮಾಡಿ ಎಂದರು.
ಐವರು ವಿದ್ಯಾರ್ಥಿಗಳು!
ತಾಲ್ಲೂಕಿನ ಹಿಲಾಲಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೇವಲ ಐವರು ಮಕ್ಕಳಿದ್ದಾರೆ. ತಿಂಗಳಿಗೆ ಸರ್ಕಾರ ಆ ಮಕ್ಕಳಿಗೆ ₹1.50 ಲಕ್ಷ ಖರ್ಚು ಮಾಡುತ್ತಿದೆ. ಶಿಕ್ಷಣಾಧಿಕಾಧಿಕಾರಿ ಗ್ರಾಮಸ್ಥರ ಪಾಲಕರ ಮನವೊಲಿಸಿ ಮಕ್ಕಳ ಹಾಜರಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.