ಉಪಗುತ್ತಿಗೆ ಬಿಲ್ ಪಾವತಿ ಮಾಡುವಂತೆ ಆಗ್ರಹಿಸಿ ದೇವದುರ್ಗ ತಾಲ್ಲೂಕು ಸಣ್ಣ ಸಿವಿಲ್ ಗುತ್ತಿಗೆದಾರರ ಸಂಘದವತಿಯಿಂದ ಲಿಂಗಸುಗೂರು ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಧರಣಿ ಆರಂಭಿಸಲಾಯಿತು
ಲಿಂಗಸುಗೂರು: ಕಾಮಗಾರಿಯ ಬಿಲ್ ಪಾವತಿ ಮಾಡುವಂತೆ ಒತ್ತಾಯಿಸಿ ದೇವದುರ್ಗ ತಾಲ್ಲೂಕು ಸಣ್ಣ ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಬುಧವಾರ ಅನಿರ್ದಿಷ್ಟಾವಧಿ ಉಪವಾಸ ಧರಣಿ ಆರಂಭಿಸಲಾಯಿತು.
ಎನ್.ಡಿ.ವಡ್ಡರ ಕಂಪನಿಗೆ ಸರ್ಕಾರ ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಹಾಗೂ ದುರಸ್ತಿ ಪ್ಯಾಕೇಜ್ ಒಂದು ಮತ್ತು ಎರಡನೇ ಗುತ್ತಿಗೆ ನೀಡಿ ಒಪ್ಪಂದ ಮಾಡಿಕೊಂಡಿದೆ. ಎನ್.ಡಿ.ವಡ್ಡರ ಕಂಪನಿಯೊಂದಿಗೆ ದೇವದುರ್ಗದ ತುಕರಾಮ ಜಿನ್ನಾಪುರ ಹೆಸರಿನಲ್ಲಿ ಉಪಗುತ್ತಿಗೆ ಪಡೆದು ಒಪ್ಪಂದಂತೆ 17ನೇ ವಿತರಣಾ ನಾಲೆ ಅಡಿಯಲ್ಲಿ ಒಟ್ಟು 13.5 ಕಿ.ಮೀ ಕಾಮಗಾರಿ ಮಾಡಲಾಗಿದ್ದು ಅದರ ಬಿಲ್ ₹4.87 ಕೋಟಿ ಆಗಿದೆ. ಕಂಪನಿ ಮಾಲೀಕ ಕರಿಯಪ್ಪ ವಜ್ಜಲ್ ಅವರು ಕಾಮಗಾರಿ ಮುಗಿದ ಆರು ತಿಂಗಳಲ್ಲಿ ಬಿಲ್ ಪಾವತಿ ಮಾಡುವುದಾಗಿ ಮೌಖಿಕ ಭರವಸೆ ನೀಡಿದ್ದರು. ಆದರೆ ಆರು ತಿಂಗಳು ಕಳೆದ ನಂತರ ನಾನಾ ಸಬೂಬು ಹೇಳುತ್ತಿದ್ದಾರೆ, ಬಿಲ್ ಪಾವತಿ ಮಾಡುತ್ತಿಲ್ಲ ಎಂದು ಧರಣಿ ನಿರತರು ಒತ್ತಾಯಿಸಿದ್ದಾರೆ.
ಈಗಾಗಲೇ ಸರ್ಕಾರದಿಂದ ಕಂಪನಿಗೆ ₹375 ಕೋಟಿ ಬಿಲ್ ಪಾವತಿ ಮಾಡಲಾಗಿದೆ, ಆದರೆ ನಮಗೆ ಬಿಲ್ ಪಾವತಿ ಮಾಡುವಲ್ಲಿ ಕಂಪನಿ ಮಾಲೀಕರು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ಬಿಲ್ ಪಾವತಿ ಮಾಡುವಂತೆ ಶಾಸಕ ಮಾನಪ್ಪ ವಜ್ಜಲ್ ಅವರಿಗೂ ಸಾಕಷ್ಟು ಭಾರಿ ಒತ್ತಾಯ ಮಾಡಿದರೂ, ದೇವದುರ್ಗ ಶಾಸಕಿ ಕರೆಮ್ಮ ನಾಯಕ ಅವರಿಂದ ಹೇಳಿಸಿದರೂ ಬಿಲ್ ಪಾವತಿ ಮಾಡುತ್ತಿಲ್ಲ. ಕಂಪನಿಯ ಮಾಲೀಕ ಶಾಸಕ ಮಾನಪ್ಪ ವಜ್ಜಲ್ ಅವರ ವಿಚಾರಣೆ ಕೈಗೊಂಡು ಕಾಮಗಾರಿ ಬಿಲ್ ಪಾವತಿಸುವಂತೆ ಕ್ರಮ ಜರುಗಿಸುವಂತೆ ಸಂಘದ ಅಧ್ಯಕ್ಷ ಶರಣಗೌಡ ಸುಂಕೇಶ್ವರಹಾಳ ವಿಧಾನಸಭಾ ಸಭಾಪತಿಗೆ ಬರೆದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ತುಕರಾಮ ಜಿನ್ನಾಪುರ, ಪರಮಾನಂದ ದೇಸಾಯಿ, ಶಿವರಾಜ ಅಮಾರಪುರ, ಅಂಜಿನೇಯ ಬಡಿಗೇರ, ವಿರೇಶ ನಾಯಕ, ರಂಗಪ್ಪ ಮಟ್ಟೂರು, ಅಮರೇಶ ಇಟಗಿ, ಆದೇಶ ನಗನೂರು, ಚಿದಾನಂದ ಕಸಬಾಲಿಂಗಸುಗೂರು ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.