ADVERTISEMENT

ಶೈಕ್ಷಣಿಕ ಪ್ರಗತಿಗೆ ಸಹಕರಿಸಿ: ಸಚಿವ ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 14:23 IST
Last Updated 24 ಜೂನ್ 2020, 14:23 IST
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ   

ರಾಯಚೂರು: ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಐಐಐಟಿಗೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಸಹಕಾರ ನೀಡಬೇಕು. ಆ ಮೂಲಕ ಈ ಭಾಗದ ಶೈಕ್ಷಣಿಕ ಪ್ರಗತಿಗೆ ಸಹಕರಿಸುವಂತೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೋರಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೈಕ್ರೋ ಹಾಗೂ ಮ್ಯಾಕ್ರೋ ಯೋಜನೆ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಐಐಐಟಿ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ದಾರಿದೀಪವಾಗಲಿದೆ. ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಇದೀಗ ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಐಐಐಟಿ ಸಾಧ್ಯವಾದಷ್ಟು ಕೂಡಲೇ ನಗರದ ಹೊರ ವಲಯದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಾರ್ಯಾರಂಭಿಸಲಿದೆ, ಅದಕ್ಕಾಗಿ ಮೂಲ ಸೌಕರ್ಯಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದರು.

ADVERTISEMENT

ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಮಾತನಾಡಿ, ಹೈದರಾಬಾದ್‌ನಲ್ಲಿರುವ ಐಐಐಟಿ ಮುಖ್ಯಸ್ಥರು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಮೂಲ ಸೌಕರ್ಯಗಳನ್ನು ಪರಿಶೀಲಿಸಲು, ಇದೇ ಜೂನ್‌ 27 ರಂದು ಬರಲಿದ್ದಾರೆ. ಐಐಐಟಿಯ ಅಗತ್ಯಕ್ಕನುಗುಣವಾಗಿ ಸಕಲ ಸಿದ್ದತಾ ಕಾರ್ಯಗಳನ್ನು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಿರ್ವಹಿಸಲಾಗುತ್ತಿದೆ. ಪ್ರಸಕ್ತ ವರ್ಷವೇ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಐಐಐಟಿ ಕಾರ್ಯಾರಂಭಗೊಳ್ಳುವ ಸಾಧ್ಯತೆ ಇದೆ ಎಂದರು.

ಜಿಲ್ಲೆಯ ಅಭಿವೃದ್ಧಿಯ ದಿಸೆಯಲ್ಲಿ ಎಲ್ಲಾ ಜನಪ್ರತಿನಿಧಿಗಳ ಸಹಕಾರ ಅಗತ್ಯ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯಡಿ ಬರುವ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಂಸದರಾದ ಕರಡಿ ಸಂಗಣ್ಣ, ರಾಜಾ ಅಮರೇಶ್ವರ ನಾಯಕ, ಶಾಸಕರಾದ ಕೆ. ಶಿವನಗೌಡ ನಾಯಕ, ಡಾ. ಶಿವರಾಜ್ ಪಾಟೀಲ್, ರಾಜಾ ವೆಂಕಟಪ್ಪ ನಾಯಕ, ಬಸನಗೌಡ ದದ್ದಲ್ ಹಾಗೂ ಡಿ.ಎಸ್. ಹೂಲಗೇರಿ, ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಹಾಗೂ ಅಪರ ಜಿಲ್ಲಾಧಿಕಾರಿ ದುರುಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.