ADVERTISEMENT

ಕೋವಿಡ್-19 ಭೀತಿ: ಮಾನ್ವಿ, ಕವಿತಾಳದಲ್ಲಿ ವಾರದ ಸಂತೆ ರದ್ದು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 9:10 IST
Last Updated 18 ಮಾರ್ಚ್ 2020, 9:10 IST
   

ರಾಯಚೂರು: ಕೊರೊನಾ ವೈರಸ್‌ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಿರುವ ತಾಲ್ಲೂಕು ಆಡಳಿತವು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಬುಧವಾರ ನಡೆಯಬೇಕಿದ್ದ ಸಂತೆಯನ್ನು ರದ್ದುಗೊಳಿಸಿದೆ.

ಸಿರವಾರ ತಾಲ್ಲೂಕಿನ ಕವಿತಾಳದಲ್ಲೂ ಎಂದಿನಂತೆ ವಾರದ ಸಂತೆ ಆರಂಭಿಸಲಾಗಿತ್ತು. ಕೆಲವು ಹೊತ್ತಿನ ನಂತರ ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಂತೆ ರದ್ದುಗೊಳಿಸಿ ಸೂಚನೆ ನೀಡಿದರು. ಜನರು ಮುಗಿಬಿದ್ದು ತರಕಾರಿಗಳನ್ನು ಖರೀದಿಸಿದರು. ಆನಂತರ ಎಲ್ಲರೂ ಚದುರಿದರು.
ಪ್ರತಿವಾರ ಜನದಟ್ಟಣೆಯಿಂದ ಕೂಡಿರುತ್ತಿದ್ದ ಮಾನ್ವಿ ಮತ್ತು ಕವಿತಾಳದ ತರಕಾರಿ ಮಾರುಕಟ್ಟೆಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.

ಮನೆಯಿಂದ ಹೊರಬರದಂತೆ ಸೂಚನೆ: ಕಲಬುರ್ಗಿಯಲ್ಲಿ ಮಾರ್ಚ್‌ 10 ರಂದು ನಡೆದಿದ್ದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಕವಿತಾಳದ ವ್ಯಕ್ತಿಯೊಬ್ಬರ ಬಗ್ಗೆ ಸುಳಿವು ಗೊತ್ತಾಗುತ್ತಿದ್ದಂತೆ, ಆರೋಗ್ಯ ಇಲಾಖೆಯ ಸಿಬ್ಬಂದಿ ಅವರ ಮನೆಗೆ ಧಾವಿಸಿದರು. ಆರೋಗ್ಯ ತಪಾಸಣೆ ಕೈಗೊಂಡು, ಯಾವುದೇ ಕಾರಣಕ್ಕೂ ಮನೆಯಿಂದ ಹೊರಗಡೆ ಬಾರದಂತೆ ತಿಳಿವಳಿಕೆ ನೀಡಿದರು.

ADVERTISEMENT

ವಿದೇಶದಿಂದ ದಂಪತಿ ವಾಪಸ್‌: ಜಿಲ್ಲೆಯ ಕವಿತಾಳ ಸಮೀಪದ ಲಕ್ಷ್ಮೀಕ್ಯಾಂಪ್‌ಗೆ ವಿದೇಶದಿಂದ ವಾಪಸಾಗಿರುವ ದಂಪತಿಯ ಮನೆಗೆ ತಹಶೀಲ್ದಾರ್‌ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ತಿಳಿವಳಿಕೆ ನೀಡಿದರು.

ಸೌದಿ ಅರೇಬಿಯಾದ ಅಬುದಾಬಿಯಲ್ಲಿ ಕೆಲವು ದಿನಗಳವರೆಗೆ ನೆಲೆಸಿದ್ದ ದಂಪತಿ ಈಗ ವಾಪಸಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.