ದೇವದುರ್ಗ: ಇಳುವರಿ ಹಾಗೂ ಉತ್ತಮ ಧಾರಣೆ ಕನಸಿನೊಂದಿಗೆ ಹತ್ತಿ ಬೇಸಾಯ ಮಾಡಿದ್ದ ರೈತರಿಗೆ ಈ ವರ್ಷದ ಬೆಳೆ ಖುಷಿ ನೀಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಸತತ ಮಳೆಯಿಂದ ಅತಿವೃಷ್ಟಿಗೆ ಸಿಲುಕಿದ ಹತ್ತಿಯ ಇಳುವರಿ ಕಡಿಮೆಯಾಗುವ ಭೀತಿ ಎದುರಾಗಿದೆ.
ಅರಕೇರಾ ಮತ್ತು ದೇವದುರ್ಗ ಅವಳಿ ತಾಲ್ಲೂಕುಗಳಲ್ಲಿ ಗಬ್ಬೂರು, ಜಾಲಹಳ್ಳಿ, ಗಲಗ, ಆಲ್ಕೋಡ, ಜಾಗೀಜಾಡದಿನ್ನಿ, ಎನ್.ಗಣೇಕಲ್, ಮುಸ್ಟೂರು, ಬಿ.ಗಣೇಕಲ್, ಮಸರಕಲ್, ಕೋಣಚಪ್ಪಳಿ, ನಾಗಡದಿನ್ನಿ, ಮಸೀದಪುರ ಸೀಮಾಂತರ ಪ್ರದೇಶ ಸೇರಿದಂತೆ ಸುಮಾರು 56,246 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಅತಿ ತೇವಾಂಶದಿಂದ ತಾಮ್ರ ರೋಗ ತುತ್ತಾಗಿ ಒಣಗುತ್ತಿದೆ. ಮುಂಗಾರುಆರಂಭದಲ್ಲಿ ಬಿತ್ತನೆ ಮಾಡಿದ ರೈತರ ಬೆಳೆ ಆಳೆತ್ತರ ಬೆಳೆದು ಗಿಡದ ತುಂಬ ಹೂವು, ಕಾಯಿ ಹೊತ್ತು ನಳನಳಿಸಬೇಕಾಗಿತ್ತು ಆದರೆ ಬೆಳವಣಿಗೆ ಕಾಣದೆ ನಲುಗಿವೆ.
ಈ ವರ್ಷ ಹತ್ತಿ ಬೆಳೆ ಸಂಕಷ್ಟ ತರಲಿದೆ. ಸರ್ಕಾರ ಹತ್ತಿ ಬೆಳೆದ ರೈತರ ನೆರವಿಗೆ ಬರಬೇಕು ಎಂದು ಮಸೀದಪುರದ ರೈತ ಗಂಗಯ್ಯ ಒತ್ತಾಯಿಸಿದ.
ಹತ್ತಿ ಬೆಳೆ ತೊಗರಿ ಬೆಳೆಯಂತೆ ದೀರ್ಘಾವಧಿ ಬೆಳೆಯಾಗಿದ್ದು ಉತ್ತಮ ಫಸಲು ಕಾಣಬೇಕಾದರೆ ಗಿಡಗಳ ಬೆಳವಣಿಗೆ ಚೆನ್ನಾಗಿರಬೇಕು. ಗಿಡದ ರೆಂಬೆ, ಕೊಂಬೆಗಳು ಚಾಚಿಕೊಂಡಿದ್ದರೆ ನೂರಾರು ಹೂವು, ಕಾಯಿಗಳಾಗಿ ನಿರೀಕ್ಷಿತ ಫಸಲು ಕಾಣಿಸಲು ಸಾಧ್ಯ. ಆದರೆ ಗಿಡಗಳ ಬೆಳವಣಿಗೆ ಕುಂಠಿತಗೊಂಡಿದ್ದು ರೈತರ ಚಿಂತೆಗೆ ಕಾರಣವಾಗಿದೆ.
ವಾಡಿಕೆಗಿಂತ ಮುಂಗಾರು ಪೂರ್ವದಲ್ಲಿ ಬಂದ ಮಳೆ ರೈತರಿಗೆ ಸಂಕಷ್ಟ ತಂದಿದೆ. ಉತ್ತಮ ಬೆಳೆ ಬೆಳೆದಿದ್ದ ರೈತರಿಗೆ ನಿರಾಶಯಾಗಿದೆ. ಸರ್ಕಾರ ಪರಿಹಾರ ನೀಡಬೇಕುಸಿದ್ಧಾರೂಡ ಜಾಗಟಕಲ್ ಗ್ರಾಮದ ರೈತ
ಅತಿವೃಷ್ಟಿಯಿಂದ ಹಾನಿಯಾದ ಬೆಳೆ ಸಮೀಕ್ಷೆ ಮಾಡಿ ಸರ್ಕಾರ ರೈತರಿಗೆ ಪರಿಹಾರ ಒದಗಿಸಬೇಕು. ಪರಿಹಾರ ವಿಳಂಬ ಆದರೆ ರೈತ ಸಂಕಷ್ಟಕ್ಕೆ ಸಿಲುಕಿಯಲ್ಲಿದ್ದಾನೆಹಾಜಿ ಮಸ್ತಾನ್ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.