ADVERTISEMENT

ರಾಯಚೂರು | ಪರಿಹಾರ ಘೋಷಿಸಲು ಆಗ್ರಹ: ಹತ್ತಿ ಬೆಳೆಗಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 6:03 IST
Last Updated 9 ಅಕ್ಟೋಬರ್ 2025, 6:03 IST
ರಾಯಚೂರು ಜಿಲ್ಲಾಡಳಿತ ಭವನದ ಆವರಣದಲ್ಲಿ ರೈತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು
ರಾಯಚೂರು ಜಿಲ್ಲಾಡಳಿತ ಭವನದ ಆವರಣದಲ್ಲಿ ರೈತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು   

ರಾಯಚೂರು: ಹತ್ತಿಗೆ ಬೆಳೆ ನಷ್ಟ ಪರಿಹಾರ ಘೋಷಿಸಬೇಕು ಹಾಗೂ ಹತ್ತಿ ಖರೀದಿ ಕೇಂದ್ರ ಪ್ರಾರಂಭಿಸಿ ಪ್ರತಿ ಕ್ವಿಂಟಲ್‌ಗೆ ₹ 10 ಸಾವಿರ ಬೆಲೆ ನಿಗದಿ ಪಡಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ರೈತರು ಇಲ್ಲಿಯ ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

‘ಜಿಲ್ಲೆಯ ಹೋಬಳಿ, ತಾಲ್ಲೂಕು ಕೇಂದ್ರಗಳಲ್ಲಿ ಹತ್ತಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಹತ್ತಿ ಬೆಳೆಹಾನಿ ಸಮೀಕ್ಷೆ ನಡೆಸಿ ಎಕರೆಗೆ ₹25,000 ಪರಿಹಾರ ಘೋಷಿಸಬೇಕು. ರಾಜ್ಯ ಸರ್ಕಾರ ಹತ್ತಿ ಬೆಳೆಗೆ ಪ್ರೋತ್ಸಾಹಧನ ನೀಡಬೇಕು. ಹತ್ತಿ ಆಮದು ನಿಷೇಧಿಸಿ ದೇಶಿ ಹತ್ತಿ ಬೆಳೆಗಾರರನ್ನು ರಕ್ಷಿಸಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

‘ಫಸಲ್ ಬಿಮಾ ಯೋಜನೆಯಡಿ ವಿಮೆ ಕಟ್ಟಿದ ರೈತರಿಗೆ ತಕ್ಷಣ ಪರಿಹಾರ ಒದಗಿಸಬೇಕು.
ಸೂಟು ಮುರಿಯುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಎಪಿಎಂಸಿಯಲ್ಲಿ ಬೆಲೆ ನಿಗದಿ ಆದ ನಂತರ ಜಿನ್ನಿಂಗ್‌ ಮಿಲ್‌ಗಳಲ್ಲಿ ದರ ಕಡಿಮೆ ಮಾಡದಂತೆ ಖಾತ್ರಿಪಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ರಾಜ್ಯ ಕಾರ್ಯದರ್ಶಿ ಬಿ.ಭಗವಾನ್ ರೆಡ್ಡಿ ಮಾತನಾಡಿ, ‘ಹತ್ತಿ ಬೆಳೆಗಾರರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಸರ್ಕಾರದ ಈ ನಿರ್ಲಕ್ಷ್ಯದಿಂದಾಗಿ ಬೆಳೆದ ಹತ್ತಿಯನ್ನು ಅತ್ಯಂತ ಕಡಿಮೆ ದರದಲ್ಲಿ ವ್ಯಾಪಾರಸ್ಥರಿಗೆ ಕೊಡುವ ಪರಿಸ್ಥಿತಿ ಬಂದಿದೆ’ ಎಂದು ಹೇಳಿದರು.

‘ಖರೀದಿ ಕೇಂದ್ರದಲ್ಲಿ ಹತ್ತಿ ಮಾರಾಟ ಮಾಡಿದರೂ ಬೇಗ ಹಣ ಬರುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಖರೀದಿ ಕೇಂದ್ರಕ್ಕಾಗಿ ವರ್ಷಕ್ಕೆ  ಹತ್ತು ಸಾವಿರ ಕೋಟಿ ರೂಪಾಯಿ ಆವರ್ತನಿಧಿಯನ್ನು ಇಡಬೇಕು’ ಎಂದು ಒತ್ತಾಯಿಸಿದರು.

ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ಚನ್ನಬಸವ ಜಾನೇಕಲ್   ಮಾತನಾಡಿ,‘ಆನ್‌ಲೈನ್ ನೋಂದಣಿ ರದ್ದು ಮಾಡಬೇಕು’ ಎಂದು ಆಗ್ರಹಿಸಿದರು.

‘ಪ್ರತಿ ವರ್ಷ ಹತ್ತಿಗೆ ಕ್ವಿಂಟಲ್‌ಗೆ ₹7,000 ದಿಂದ ₹ 8,500 ಬೆಲೆ ಸಿಗುತ್ತಿತ್ತು. ಆದರೆ, ಈ ಬಾರಿ ಕೇವಲ ₹4,000 ದಿಂದ ₹6,000 ಗೆ ಕುಸಿದು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರವು ರೈತರ ನೆರವಿಗೆ ಧಾವಿಸಬೇಕು’ ಎಂದು ಮನವಿ ಮಾಡಿದರು.

ನಂತರ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ಹಾಗೂ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದರು.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ ಅಂಚೆಸಗೂರು, ಜಿಲ್ಲಾ ಉಪಾಧ್ಯಕ್ಷ ದುರ್ಗಣ್ಣ ಅಡಕಲಗುಡ್ಡ, ವೀರೇಶ ಜಕ್ಕಲದಿನ್ನಿ, ರಿಹಾನುದ್ದೀನ್, ಹುಲಿಗೆಪ್ಪ, ವಂದಲಯ್ಯ ಅಡಕಲಗುಡ್ಡ, ಆದ್ಯಪ್ಪ ಕಲ್ಲೂರು, ಹನುಮಯ್ಯ ಕಲ್ಲೂರು, ಶರಣಗೌಡ ಆಲ್ಕೋಡ್, ಹನುಮಯ್ಯ ದೊರೆ ಗಲಗ, ಶಾಂತಪ್ಪ ಎನ್.ಗಣೆಕಲ್ ಹಾಗೂ ಭೀಮೇಶ ಗುಂಜಹಳ್ಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರವು ಹತ್ತಿಯ ಮೇಲೆ ವಿಧಿಸಿದ್ದ ಶೇ11ರಷ್ಟು ಆಮದು ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕಿರುವುದು ರೈತ ವಿರೋಧಿ  ನಿರ್ಧಾರವಾಗಿದೆ.
-ಬಿ.ಭಗವಾನ್ ರೆಡ್ಡಿ ರೈತ ಮುಖಂಡ

Quote -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.