ADVERTISEMENT

ದರ ಏರಿಕೆ: ಸಿಪಿಐ(ಎಂ) ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 13:35 IST
Last Updated 25 ಫೆಬ್ರುವರಿ 2021, 13:35 IST
ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ ವಾದ) ಜಿಲ್ಲಾ ಘಟಕದ ಪದಾಧಿಕಾರಿಗಳು ಗೃಹ ಸಚಿವ ಅಮಿತ್ ಷಾ ಹಾಗೂ ಪ್ರಧಾನಿ ಮೊದಿ ಅವರ ಭಾವಚಿತ್ರ ದಹಿಸಿ ಪ್ರತಿಭಟನೆ ನಡೆಸಿದರು
ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ ವಾದ) ಜಿಲ್ಲಾ ಘಟಕದ ಪದಾಧಿಕಾರಿಗಳು ಗೃಹ ಸಚಿವ ಅಮಿತ್ ಷಾ ಹಾಗೂ ಪ್ರಧಾನಿ ಮೊದಿ ಅವರ ಭಾವಚಿತ್ರ ದಹಿಸಿ ಪ್ರತಿಭಟನೆ ನಡೆಸಿದರು   

ರಾಯಚೂರು: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ತಡೆಗಟ್ಟಲು ಒತ್ತಾಯಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ ವಾದ) ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಆನಂತರ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರ ಪ್ರತಿಕೃತಿ ದಹನ ಮಾಡಲು ಮುಂದಾದಾಗ ಪೊಲೀಸರು ಅಡ್ಡಿಪಡಿಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತಳ್ಳಾಟ ನಡೆಯಿತು.

ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ (ಗ್ಯಾಸ್) ಹಣ್ಣು–ತರಕಾರಿ ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದವರ ಬದುಕು ಸಂಕಷ್ಟಕ್ಕೆ ಸಿಲುಕಿಸಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಡಿಸೆಲ್ ಬೆಲೆ ಏರಿಸಿದ ಪರಿಣಾಮ ಎಲ್ಲಾ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ.

ADVERTISEMENT

ಬಿಜೆಪಿ ಸರ್ಕಾರ 2014 ರಲ್ಲಿ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಬೆಲೆ ₹72ರ ಸನಿಹವಿತ್ತು. ಅಂತರರಾಷ್ಟ್ರೀಯ ಕಚ್ಛಾ ತೈಲದ ಬೆಲೆ ಒಂದು ಬ್ಯಾರಲ್‌ಗೆ 110 ಡಾಲರ್ ಆಸುಪಾಸ್‌ನಲ್ಲಿತ್ತು. ಈಗ ಅಂತರರಾಷ್ಟ್ರೀಯ ಕಚ್ಛಾ ತೈಲದ ಬೆಲೆ 56 ಡಾಲರ್‌ಗೆ ಇಳಿದಿದೆ. ಇದರ ಪ್ರಕಾರ ಪೆಟ್ರೋಲ್ ಬೆಲೆ ₹36 ಇರಬೇಕಾಗಿತ್ತು. ಆದರೆ ರಾಜ್ಯದಲ್ಲಿ ₹94 ದಾಟಿ ನೂರರತ್ತ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಬಕಾರಿ ಸುಂಕಗಳಲ್ಲಿನ ಹೆಚ್ಚಳ ಕಾರ್ಪೋರೇಟ್ ಕಂಪನಿಗಳ ಮತ್ತು ಆದಾಯ ತೆರಿಗೆ ಪಾವತಿದಾರರಿಗೆ ಒದಗಿಸಿರುವ ಆದಾಯ ತೆರಿಗೆ ರಿಯಾಯ್ತಿಯಿಂದಾಗಿ ಸಮಸ್ಯೆಯಾಗಿದೆ. ಸರ್ಕಾರದ ಆದಾಯಕ್ಕೆ ಆಗುತ್ತಿರುವ ನಷ್ಟವನ್ನು ಭರ್ತಿ ಮಾಡಿಕೊಳ್ಳಲು ದರ ಏರಿಕೆ ಮಾಡುತ್ತಿದೆ ಎಂದು ಆರೋಪಿಸಿದರು.

ಕೂಡಲೇ ಅಬಕಾರಿ ಸುಂಕಗಳನ್ನು ಹಿಂತೆಗೆದು ಬೆಲೆ ಏರಿಕೆ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಪಕ್ಷದ ಮುಖಂಡ ಕೆ.ಜಿ.ವೀರೇಶ, ಕರಿಯಪ್ಪ ಹಚ್ಚೊಳ್ಳಿ, ಡಿ.ಎಸ್.ಶರಣಬಸವ,ಎಚ್.ಪದ್ಮಾ, ಜಿಲಾನಿಪಾಷ, ಶಿವಕುಮಾರ ಮ್ಯಾಮಗಳಮನಿ, ಲಿಂಗರಾಜ ಕಂದಗಲ, ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.