ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಸಿಪಿಐಎಂನಿಂದ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 7:05 IST
Last Updated 17 ಡಿಸೆಂಬರ್ 2025, 7:05 IST
ಸಿಂಧನೂರಿನ ಭಾರತ ಕಮ್ಯೂನಿಷ್ಟ್ ಪಕ್ಷದ ತಾಲ್ಲೂಕು ಘಟಕದಿಂದ ಮಂಗಳವಾರ ಮಿನಿವಿಧಾನಸೌಧ ಕಚೇರಿಯ ಮುಂದೆ ಪ್ರತಿಭಟಿಸಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು
ಸಿಂಧನೂರಿನ ಭಾರತ ಕಮ್ಯೂನಿಷ್ಟ್ ಪಕ್ಷದ ತಾಲ್ಲೂಕು ಘಟಕದಿಂದ ಮಂಗಳವಾರ ಮಿನಿವಿಧಾನಸೌಧ ಕಚೇರಿಯ ಮುಂದೆ ಪ್ರತಿಭಟಿಸಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು   

ಸಿಂಧನೂರು: ಶಿಕ್ಷಣ, ಆರೋಗ್ಯ, ಕೃಷಿ ಸುಧಾರಣೆ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷದ ತಾಲ್ಲೂಕು ಘಟಕದಿಂದ ಮಂಗಳವಾರ ಸ್ಥಳೀಯ ಪ್ರವಾಸಿ ಮಂದಿರದಿಂದ ಮಿನಿವಿಧಾನಸೌಧ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಕಾರ್ಯದರ್ಶಿ ಬಸವಂತರಾಯಗೌಡ ಕಲ್ಲೂರು ಮಾತನಾಡಿ, ‘ತಾಲ್ಲೂಕಿನ ಪ್ರಾಥಮಿಕ ಶಾಲೆಗಳಿಗೆ 1,585 ಶಿಕ್ಷಕರ ಹುದ್ದೆ ಮಂಜೂರಾಗಿದ್ದರೂ, 816 ಹುದ್ದೆಗಳು ಖಾಲಿಯಿವೆ. ಪ್ರೌಢಶಾಲೆಗಳಿಗೆ 431 ಶಿಕ್ಷಕರು ಮಂಜೂರಾಗಿದ್ದು, ಅದರಲ್ಲಿ 241 ಕೊರತೆಯಿವೆ. ತಕ್ಷಣವೇ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು. ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ತಾಯಿ-ಮಕ್ಕಳ ಆಸ್ಪತ್ರೆ ಸೇರಿದಂತೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅವ್ಯವಸ್ಥೆ ಸರಿಪಡಿಸಬೇಕು. ಕಾಯಂ ವೈದ್ಯರನ್ನು ನೇಮಿಸಿ, ಅಗತ್ಯ ಚಿಕಿತ್ಸಾ ಸಲಕರಣೆಗಳನ್ನು ಒದಗಿಸಬೇಕು. ನಗರದಲ್ಲಿ ಯುಜಿಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಅದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ನಿರಂತರ ಕುಡಿಯುವ ನೀರು ಯೋಜನೆ ಪೂರ್ಣಗೊಳಿಸಬೇಕು’ ಎಂದು ಆಗ್ರಹಿಸಿದರು.

‘ನಗರದ ವಾರ್ಡ್ ನಂ.25 ರಲ್ಲಿ ಮಹಿಳಾ ಶೌಚಾಲಯ ಕಾಮಗಾರಿ ಪ್ರಾರಂಭಿಸಬೇಕು. ನಗರಸಭೆಗೆ ಅರ್ಜಿ ಸಲ್ಲಿಸಿದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು. 60 ವರ್ಷ ಮೇಲ್ಪಟ್ಟವರಿಗೆ ನೀಡುತ್ತಿರುವ ವೃದ್ಯಾಪ್ಯ ವೇತನವನ್ನು ಮನೆ ಬಾಗಲಿಗೆ ತಲುಪಿಸುವ ವ್ಯವಸ್ಥೆಯನ್ನು ಅಂಚೆ ಇಲಾಖೆಯಿಂದ ಮಾಡಿಸಬೇಕು. 54ನೇ ಉಪ ಕಾಲುವೆ ಅಡಿಯಲ್ಲಿ ಬರುವ 3 ಆರ್ ವಿತರಣಾ ಕಾಲುವೆ ದುರಸ್ತಿಗಾಗಿ ₹ 21 ಲಕ್ಷ ಮಂಜೂರಾಗಿದ್ದು, 14 ಕಾಲುವೆಗಳ ದುರಸ್ತಿ ಕಳಪೆಯಿಂದ ಕೂಡಿದೆ. ಒಂದು ಕಾಲುವೆಯ ದುರಸ್ತಿಯಾಗಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ತಾಲ್ಲೂಕಿನ ಬಹಳಷ್ಟು ಹಳ್ಳಿಗಳಲ್ಲಿ ಸ್ಮಶಾನದವಿಲ್ಲ. ಕೆಲವು ಕಡೆ ಸ್ಮಶಾನಕ್ಕೆ ರಸ್ತೆಗಳೇ ಇಲ್ಲ. ಈ ಬಗ್ಗೆ ತಾಲ್ಲೂಕು ಆಡಳಿತ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು. ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮನವಿ ಪತ್ರ ಸ್ವೀಕರಿಸಿದರು.

ಸಿಪಿಐಎಂ ಮುಖಂಡರಾದ ಎಂ.ಗೋಪಾಲಕೃಷ್ಣ, ಎಸ್.ದೇವೇಂದ್ರಗೌಡ, ರೇಣುಕಮ್ಮ, ಶರಣಮ್ಮ ಪಾಟೀಲ, ಗೇಸುದರಾಜ್, ಗರೀಬ್ ಕೊಡ್ಲಿ, ಯಂಕಪ್ಪ ಕೆಂಗಲ್, ನರಸಿಂಹಪ್ಪ ರಾಮತ್ನಾ, ಬಿ.ಲಿಂಗಪ್ಪ, ಅಪ್ಪಣ್ಣ, ಮಹೇಶ, ವಿಶ್ವನಾಥ, ವಿರೂಪಾಕ್ಷಗೌಡ, ಶ್ರೀನಿವಾಸರೆಡ್ಡಿ, ಮಲ್ಲಿಕಾರ್ಜುನ, ಅಮರೇಶ, ಮುನಿಸ್ವಾಮಿ, ಹೊನ್ನೂರಪ್ಪ, ಶಕುಂತಲಾ ಪಾಟೀಲ, ಶರಣಪ್ಪ ಜಿ., ವಿಶಾಲಾಕ್ಷಮ್ಮ, ದೇವಮ್ಮ, ಲಕ್ಷ್ಮಿ, ಶಂಕ್ರಪ್ಪ, ಚಂದಪ್ಪ, ಹುಸೇನಪ್ಪ, ವಿರೂಪಣ್ಣ, ಅಳ್ಳಪ್ಪ ಸೇರಿದಂತೆ ವಿವಿಧ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.