
ಲಿಂಗಸುಗೂರು: ಜಿಲ್ಲೆಯಾದ್ಯಂತ ಸತತವಾಗಿ ಸುರಿದ ಮಳೆಯಿಂದಾಗಿ ತೋಟಗಾರಿಕೆ, ಒಣ ಬೇಸಾಯದ ಬೆಳೆಗಳು ಹಾನಿಯಾಗಿದ್ದು, ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
‘ತೋಟಗಾರಿಕೆ ಬೆಳೆಗಳು ಸೇರಿದಂತೆ ತೊಗರಿ, ಹತ್ತಿ ಸಂಪೂರ್ಣ ನಾಶವಾಗಿದೆ. ಲಿಂಗಸುಗೂರು ಮತ್ತು ಮಸ್ಕಿ ತಾಲ್ಲೂಕಿನ ಕೆಲವೇ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಜಮಾ ಆಗಿದೆ. ಇನ್ನೂ ಬಹಳಷ್ಟು ರೈತರಿಗೆ ಪರಿಹಾರ ಬಂದಿಲ್ಲ. ವಿಮಾ ಹಣ ಸಹ ಜಮಾ ಆಗಿಲ್ಲ. ಕೂಡಲೇ ರೈತರಿಗೆ ಪರಿಹಾರದ ಹಣ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ಲಿಂಗಸುಗೂರು, ಮಸ್ಕಿ ಎಪಿಎಂಸಿಯಲ್ಲಿ ಪ್ರತಿ ವರ್ಷ ಧಾನ್ಯಗಳನ್ನು ಗೋಣಿ ಚೀಲಗಳಲ್ಲಿ ತೂಕ ಮಾಡುತ್ತಿದ್ದರು. ಆದರೆ, ಈಗ ಪ್ಲಾಸ್ಟಿಕ್ ಚೀಲಗಳಲ್ಲಿ ತೂಕ ಮಾಡಿ ಪ್ರತಿ ಚೀಲಕ್ಕೆ 1 ಕೆ.ಜಿ ಸೂಟ್ ಮುರಿಯುತ್ತಿದ್ದಾರೆ. ಇದನ್ನು ನಿಲ್ಲಿಸಿ ಗೋಣಿ ಚೀಲಗಳಲ್ಲಿ ಧಾನ್ಯಗಳನ್ನು ತೂಕ ಮಾಡಬೇಕು’ ಎಂದು ಆಗ್ರಹಿಸಿದರು.
ಸಂಘದ ತಾಲ್ಲೂಕು ಅಧ್ಯಕ್ಷ ಮಲ್ಲಣ್ಣ ಗೌಡೂರು, ಮಸ್ಕಿ ಘಟಕದ ಅಧ್ಯಕ್ಷ ಬಸನಗೌಡ ಮಟ್ಟೂರು, ಅಮರಣ್ಣ ಅರಳಳ್ಳಿ, ನಿಂಗಪ್ಪ ಗೌಡನಬಾವಿ, ಕುಮಾರಸ್ವಾಮಿ, ಚಂದಾವಲಿಸಾಬ ಮುದಗಲ್, ಬಾಗನಗೌಡ ಹಟ್ಟಿ, ಹುಸೇನ ನಾಯಕ ಮುದಗಲ್, ವೆಂಕೋಬ ನಾಯಕ, ಕಾಸಿಮ್ ಸಾಬ ಮುದಗಲ್, ಈರಣ್ಣ ಗುಡಿಹಾಳ, ನಾಗರಾಜ ಗುಡಿಹಾಳ, ಯಂಕಣ್ಣ ಗುಡಿಹಾಳ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.