ಹಟ್ಟಿ ಚಿನ್ನದ ಗಣಿ: ತೊಗರಿ, ಹೆಸರು ಬೆಳೆಗೆ ಮಜ್ಜಿಗೆ ರೋಗ ತಗುಲಿ ಬೆಳೆಗಳು ಒಣಗುತ್ತಿದ್ದು ರೈತರು ನಷ್ಟದ ಭೀತಿಯಲ್ಲಿದ್ದಾರೆ.
ನಿರಂತರವಾಗಿ ಮಳೆ ಸುರಿದ ಪರಿಣಾಮ ತೇವಾಂಶ ಹೆಚ್ಚಳವಾಗಿ ಬೆಳೆಗಳಿಗೆ ಮಜ್ಜಿಗೆ ರೋಗ ತಗುಲಿ ಒಣಗುತ್ತಿವೆ. ಔಷಧಿ ಸಿಂಪಡಣೆ ಮಾಡಿದರು ಹತೋಟಿಗೆ ಬರುತ್ತಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಸರ್ವೆ ಮಾಡಿ ಪರಿಹಾರ ಒದಗಿಸಬೇಕು ಎನ್ನುವುದು ರೈತರ ಆಗ್ರಹ.
ಗೌಡೂರು, ಮಾಚನೂರು, ಯಲಗಟ್ಟಾ, ಕೊಠಾ, ಗುರುಗುಂಟಾ, ಪೈದೊಡ್ಡಿ ಬಂಡೆಭಾವಿ ಸೇರಿದಂತೆ ಇತರ ಗ್ರಾಮದಲ್ಲಿ ಅತಿ ಹೆಚ್ಚು ತೊಗರಿ, ಸೂರ್ಯಕಾಂತಿ, ಹೆಸರು ಬೆಳೆಯಲಾಗಿದೆ. ಆದರೆ ತೇವಾಂಶ ಹೆಚ್ಚಳದಿಂದ ಹೆಸರು ಬೆಳೆ ಹಾಳಾಗಿದೆ.
ಗುರುಗುಂಟಾ ಗ್ರಾಮದಲ್ಲಿ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ಸೂರ್ಯಕಾಂತಿ, ಹೆಸರು ಬೆಳೆಯಲಾಗಿದೆ.
‘ಜಿಟಿ ಜಿಟಿ ಮಳೆಯಿಂದ ತೊಗರಿ, ಹೆಸರು ಬೆಳೆಗಳಿಗೆ ಮಜ್ಜಿಗೆ ರೋಗ ತಗುಲಿ ಒಣಗುತ್ತಿದ್ದು ಸರ್ಕಾರ ರೈತರ ನೆರವಿಗೆ ದಾವಿಸಬೇಕು’ ಎಂದು ರಾಜ್ಯ ರೈತ ಸಂಘ ಹಸರು ಸೇನೆ ತಾಲ್ಲೂಕು ಕಾರ್ಯದರ್ಶಿ ಬಸವಾರಜ ಗೌಡೂರು ಆಗ್ರಹಿಸಿದ್ದಾರೆ.
‘ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದರು. ಮಳೆಯಿಂದ ಬೆಳೆಗಳು ಹಾಳಾಗಿವೆ, ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಒದಗಿಸಲಿ’ ಎಂದು ಯಲಗಟ್ಟಾ ಗ್ರಾಮದ ರೈತ ರಾಜು ನಾಯಕ ಒತ್ತಾಯಿಸಿದರೆ, ‘ತೊಗರಿ, ಹೆಸರು, ಸೂರ್ಯಕಾಂತಿ ಬೆಳೆಗಳ ಸರ್ವೆ ಮಾಡಿಸಿ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಬೆಳೆ ನಷ್ಟದ ಪರಿಹಾರವನ್ನು ರೈತರಿಗೆ ಒದಗಿಸಬೇಕು’ ಎಂದು ಗುರುಗುಂಟಾದ ರೈತ ಚಂದ್ರಶೇಖರ ನಾಯಕ ಒತ್ತಾಯಿಸಿದ್ದಾರೆ.
ನಿತಂತರ ಮಳೆಗೆ ಸಿಲುಕಿದ ಹೆಸರು ಬೆಳೆ ಮಳೆಗೆ ಕಲ್ಲು ಬಣ್ಣಕ್ಕೆ ತಿರುಗಿ ಒಣಗಿರುವುದು.
ಬೆಳೆ ಹಾನಿ ಬಗ್ಗೆ ರೈತರಿಂದ ದೂರುಗಳು ಬಂದಿವೆ. ಸಮಸ್ಯೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದುಹನುಮಂತ ರಾಠೋಡ್ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಗುರುಗುಂಟಾ ಹೋಬಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.