ADVERTISEMENT

‍‘ಸೈಬರ್ ವಂಚನೆ: ಜಾಗೃತಿ ಅಗತ್ಯ’

ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೈಬರ್ ಕ್ರೈಂ ಕುರಿತು ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 5:58 IST
Last Updated 10 ಜನವರಿ 2026, 5:58 IST
ಸಿಂಧನೂರಿನ ನಗರಸಭೆ ಸಭಾಂಗಣದಲ್ಲಿ ನಡೆದ ಸೈಬರ್ ಕ್ರೈಂ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಸೈಬರ್ ಕ್ರೈಂ ವಿಭಾಗದ ಡಿವೈಎಸ್‍ಪಿ ವೆಂಕಟೇಶ ಹೊಗಿಬಂಡಿ ಮಾತನಾಡಿದರು
ಸಿಂಧನೂರಿನ ನಗರಸಭೆ ಸಭಾಂಗಣದಲ್ಲಿ ನಡೆದ ಸೈಬರ್ ಕ್ರೈಂ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಸೈಬರ್ ಕ್ರೈಂ ವಿಭಾಗದ ಡಿವೈಎಸ್‍ಪಿ ವೆಂಕಟೇಶ ಹೊಗಿಬಂಡಿ ಮಾತನಾಡಿದರು   

ಸಿಂಧನೂರು: ‘ಅಪರಾಧ ಕೃತ್ಯಗಳ ಸ್ವರೂಪ ಬದಲಾಗುತ್ತಿದೆ. ಸೈಬರ್ ವಂಚನೆ ಕುರಿತು ಜಾಗೃತಿ ವಹಿಸುವುದು ಅಗತ್ಯ’ ಎಂದು ರಾಯಚೂರು ಜಿಲ್ಲಾ ಸೈಬರ್ ಕ್ರೈಂ ವಿಭಾಗದ ಡಿವೈಎಸ್‍ಪಿ ವೆಂಕಟೇಶ ಹೊಗಿಬಂಡಿ ಹೇಳಿದರು.

ಇಲ್ಲಿಯ ನಗರಸಭೆ ಸಭಾಂಗಣದಲ್ಲಿ ತಾಲ್ಲೂಕಾಡಳಿತ, ತಾಲ್ಲೂಕು ಪಂಚಾಯಿತಿ ಮತ್ತು ನಗರಸಭೆ ಸಹಯೋಗದಲ್ಲಿ ಶುಕ್ರವಾರ ತಾಲ್ಲೂಕುಮಟ್ಟದ ಅಧಿಕಾರಿಗಳಿಗೆ ನಡೆದ ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇಂದು ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್, ಸಾಮಾಜಿಕ ಜಾಲತಾಣಗಳ ಮೂಲಕ ಬ್ಲಾಕ್‍ಮೇಲ್, ಯುಪಿಐ ಸ್ಕ್ಯಾನ್ ಹೆಸರಿನಲ್ಲಿ ವಂಚನೆ, ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಬ್ಬರ ಹೆಸರಲ್ಲಿ ನಕಲಿ ಖಾತೆ ತೆರೆದು ಹಣಕ್ಕಾಗಿ ಬೇಡಿಕೆ ಇಡುವುದು, ಸೆಲೆಬ್ರಿಟಿಗಳ ಫೋಟೊಗಳನ್ನು ಮಾರ್ಫ್ ಮಾಡಿ ವಂಚಿಸುವುದು, ಎಪಿಕೆ ಫೈಲ್‍ಗಳ ಮೂಲಕ ವಂಚನೆ, ಕೆ–ವೈಸಿ, ಆಧಾರ್ ಅಪ್‌ಡೇಟ್‌ ಹೆಸರಿನಲ್ಲಿ ವಂಚನೆ, ಹಣ ಡಬಲ್ ಆಗುತ್ತದೆ ಎಂದು ಹಣ ಹೂಡಿಕೆ ಮಾಡಿಸಿ ಮೋಸ ಮಾಡುವುದು ಹೆಚ್ಚಾಗಿ ನಡೆಯುತ್ತಿದೆ’ ಎಂದರು.

ADVERTISEMENT

‘ಎಷ್ಟು ಜಾಗೃತಿ ಮೂಡಿಸಿದರೂ ಸೈಬರ್ ಅಪರಾಧಗಳು ಕಡಿಮೆ ಆಗುತ್ತಿಲ್ಲ. ಕೆ–ವೈಸಿ ಅಪ್‌ಡೇಟ್‌, ಒಟಿಪಿ ಕೇಳಿದರೆ ಕೊಡಬಾರದು. ಕಸ್ಟಮ್ಸ್ ಹೆಸರಲ್ಲಿ ಯಾರಾದರೂ ಹೆದರಿಸಿದರೆ ಅವರಿಗೆ ಹಣ ಕೊಡಬಾರದು. ಡಿಜಿಟಲ್ ಅರೆಸ್ಟ್ ಎನ್ನುವ ಪರಿಕಲ್ಪನೆಯೇ ನಮ್ಮಲ್ಲಿಲ್ಲ. ಹಣ ಕಳೆದುಕೊಂಡವರು ಗೋಲ್ಡನ್ ಅವರ್‌ನಲ್ಲಿ 1930ಗೆ ಕರೆ ಮಾಡಿದರೆ ಹಣ ವಾಪಸ್ ಪಡೆಯಲು ಸಾಧ್ಯ. ವೈಯಕ್ತಿಕ ಮಾಹಿತಿ ಮತ್ತು ಫೋಟೊಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಬಾರದು’ ಎಂದು ಹೇಳಿದರು.

ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.