ಲಿಂಗಸುಗೂರು: ಫೆಂಜಲ್ ಚಂಡಮಾರುತದ ಪರಿಣಾಮ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಆಗಾಗ ಸುರಿಯುವ ತುಂತುರು ಮಳೆ ಹಾಗೂ ಜೋರಾಗಿ ಬೀಸುತ್ತಿರುವ ತಂಪು ಗಾಳಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ರಾಂಪುರ ಏತ ನೀರಾವರಿ ಯೋಜನೆ, ನಾರಾಯಣಪುರ ಬಲದಂಡೆ ಮುಖ್ಯನಾಲೆ ವ್ಯಾಪ್ತಿಯಲ್ಲಿ ಬೆಳೆದ ಭತ್ತದ ಬೆಳೆಯು ಕಟಾವು ಹಂತದಲ್ಲಿದೆ. ರಭಸವಾದ ಗಾಳಿಗೆ ಭತ್ತ ಭಾಗಶಃ ನೆಲಕಚ್ಚಿದೆ. ಮೇಲ್ಭಾಗದಲ್ಲಿ ತುಂತುರು ಮಳೆ ಮತ್ತು ಶೀತ ವಾತಾವರಣ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ದುಸ್ಥಿತಿ ತಂದೊಡ್ಡಿದೆ.
ತಾಲ್ಲೂಕಿನ ನೀರಾವರಿ ಪ್ರದೇಶದಲ್ಲಿ 6,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಈ ಹಿಂದೆ ಸುರಿದ ಮಳೆಗೆ 68.05 ಹೆಕ್ಟೇರ್ ಭತ್ತ ನೆಲಕಟ್ಟಿ ಬೆಳೆ ನಷ್ಟವಾಗಿತ್ತು. ನಾಲ್ಕು ದಿನಗಳಿಂದ ಬೀಸುತ್ತಿರುವ ಗಾಳಿಗೆ ಪುನಃ 449 ಹೆಕ್ಟೇರ್ ಭತ್ತ ನೆಲಕಚ್ಚಿದೆ. ಒಟ್ಟು 598 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಇದೇ ಸ್ಥಿತಿ ಮುಂದುವರಿದರೆ ನಷ್ಟದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಮೂಲಗಳು ದೃಢಪಡಿಸಿವೆ.
ಭತ್ತ ಕಟಾವು ಹಂತದಲ್ಲಿದೆ. ರಾಶಿ ಯಂತ್ರಗಳ ಕೊರತೆ, ಯಂತ್ರಗಳ ಮಾಲೀಕರು ದರ ಹೆಚ್ಚಳ ಮಾಡಿರುವುದು ರೈತರಿಗೆ ಭಾರಿ ಸಂಕಷ್ಟ ತಂದೊಡ್ಡಿದೆ. ಕೂಲಿಕಾರರು ಭತ್ತದ ಕೊಯ್ಲಿಗೆ ಬರುತ್ತಿಲ್ಲ. ಯಂತ್ರ ಬಳಕೆ ಮಾಡುವುದು ಅನಿವಾರ್ಯವಾಗಿದೆ.
ತೊಗರಿ 35,715 ಹೆಕ್ಟೇರ್, ಹೈಬ್ರಿಡ್ ಸಜ್ಜೆ 15,874 ಹೆಕ್ಟೇರ್, ಸೂರ್ಯಕಾಂತಿ 1585 ಹೆಕ್ಟೇರ್, ಹೈಬ್ರಿಡ್ ಜೋಳ 40 ಹೆಕ್ಟೇರ್ ಸೇರಿ ಉಳಿದ ಬೆಳೆಗಳು ಕೂಡ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಗೆ ನಷ್ಟಕ್ಕೆ ಒಳಗಾಗಿವೆ. ಭಂಪರ್ ಬೆಳೆ ಮತ್ತು ಉತ್ತಮ ದರ ಸಿಗುವ ನಿರೀಕ್ಷೆಯಲ್ಲಿದ್ದ ತೊಗರಿ ಬೆಳೆದ ರೈತರಿಗೆ ನಷ್ಟದ ಭೀತಿ ಎದುರಾಗಿದೆ.
‘ಈ ಹಿಂದೆ ಸುರಿದ ಮಳೆಯಿಂದ 28.5 ಹೆಕ್ಟೇರ್ ತೊಗರಿ ಬೆಳೆ ನಷ್ಟಕ್ಕೊಳಗಾಗಿತ್ತು. ಭತ್ತದ ನಷ್ಟ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ. ಸಮೀಕ್ಷೆ ನಡೆಸಬೇಕಿದೆ. ಫೆಂಜಲ್ ಚಂಡಮಾರುತದಿಂದ ವಾತಾವರಣ ಇದೇ ರೀತಿ ಮುಂದುವರಿದರೆ ಭವಿಷ್ಯದ ಸ್ಥಿತಿ ಗಂಭೀರವಾಗಲಿದೆ. ಕಾರಣ ಸರ್ಕಾರ ಮಧ್ಯಸ್ಥಿಕೆ ವಹಿಸಿ ರೈತರಿಗೆ ಆಗುತ್ತಿರುವ ನಷ್ಟ ಭರಿಸಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಗುರುಬಾಯಿ ಹಿರೇಮಠ ಒತ್ತಾಯಿಸಿದ್ದಾರೆ.
ವರದಿ ಸಲ್ಲಿಕೆ: ಕೃಷಿ ಅಧಿಕಾರಿ
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ನಾಗರತ್ನ ಹುಲಕೋಟೆ ಮಾತನಾಡಿ‘ತಾಲ್ಲೂಕಿನಲ್ಲಿ ಬೆಳೆದ 6500 ಹೆಕ್ಟೇರ್ ಭತ್ತದ ಪೈಕಿ ಈಗಾಗಲೇ 598 ಹೆಕ್ಟೇರ್ ನಷ್ಟದ ಕುರಿತು ವರದಿ ಸಲ್ಲಿಸಲಾಗಿದೆ. ಚಂಡಮಾರುತದಿಂದ ಮತ್ತಷ್ಟು ಬೆಳೆ ನಷ್ಟಕ್ಕೊಳಗಾಗುವ ಸಾಧ್ಯತೆ ಇದೆ. ಸಮೀಕ್ಷೆ ನಡೆಸಿ ವಾಸ್ತವ ವರದಿ ಸಲ್ಲಿಸಲಾಗುವುದು. 35715 ಹೆಕ್ಟೇರ್ ತೊಗರಿ ಪೈಕಿ ಈಗಾಗಲೇ 28.5 ಹೆಕ್ಟೇರ್ ನಷ್ಟವಾಗಿದೆ. ಸಧ್ಯದ ಸ್ಥಿತಿಯಲ್ಲಿ ಏನಾಗುವುದೊ ಕಾದು ನೋಡಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.