ADVERTISEMENT

7 ರಂದು ದಂಡೋರ ಸಮಿತಿ ಬೆಳ್ಳಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 13:56 IST
Last Updated 2 ಜುಲೈ 2019, 13:56 IST

ರಾಯಚೂರು:ಮಾದಿಗ ದಂಡೋರ ಸಮಿತಿ ಸ್ಥಾಪನೆಯಾಗಿ ಜುಲೈ 7 ರಂದು 25 ವರ್ಷಗಳನ್ನು ಪೂರೈಸುತ್ತಿದ್ದು, ಈ ನಿಮಿತ್ತ ಮಾದಿಗರ ಆತ್ಮಗೌರವ ಜಾತ್ರೆಯನ್ನಾಗಿ ಆಚರಿಸಲಾಗುವುದು ಎಂದು ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ನರಸಪ್ಪ ದಂಡೋರ ಹೇಳಿದರು.

ಮಂಗಳವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಪಡೆಯುವ ಉದ್ದೇಶಕ್ಕಾಗಿ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಈದುಮೂಡಿ ಗ್ರಾಮದಲ್ಲಿ ಮಾದಿಗ ದಂಡೋರ ಸಮಿತಿ ಪ್ರಾರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೂ ಸಾಕಷ್ಟು ಹೋರಾಟಗಳನ್ನು ಮಾಡುತ್ತಾ ಬರಲಾಗಿದೆ ಎಂದು ತಿಳಿಸಿದರು.

ಮಂದಕೃಷ್ಣ ಮಾದಿಗರ ನೇತೃತ್ವದಲ್ಲಿ ಸಮಿತಿಯು ಜನ್ಮತಳೆದಿದ್ದು, ಸಮುದಾಯದ ಸ್ವಾಭಿಮಾನದ ಸಂಕೇತವಾಗಿದೆ. ದೇಶದಾದ್ಯಂತ ಹೋರಾಟಗಳು ವಿಸ್ತರಿಸಿಕೊಂಡಿವೆ ಎಂದರು.

ADVERTISEMENT

ಸಂವಿಧಾನಬದ್ಧ ಮೀಸಲಾತಿಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಐತಿಹಾಸಿಕ ಹೋರಾಟಗಳನ್ನು ಮಾಡಲಾಗಿದೆ. ಮಾದಿಗ ಎಂದು ಹೆಸರು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಸಮುದಾಯವು ಇಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ವಾತಾವರಣ ಸೃಷ್ಟಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಈದುಮೂಡಿಯಲ್ಲಿ ವಿಶೇಷ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ರಾಯಚೂರಿನಿಂದಲೂ ಬಹಳಷ್ಟು ಕಾರ್ಯಕರ್ತರು ತೆರಳಬೇಕಿದೆ ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಜಿ. ನರಸಿಂಹಲು, ಭೀಮರಾಯ, ಪ್ರಭುರಾಜ್‌, ರಾಜಗೊಂಡ, ಮಲ್ಲಪ್ಪ, ರಾಮು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.