ADVERTISEMENT

ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಆಯೋಜಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 14:05 IST
Last Updated 2 ಜನವರಿ 2020, 14:05 IST
ರಾಯಚೂರು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅಧ್ಯಕ್ಷತೆಯಲ್ಲಿ ‘ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದ ಪೂರ್ವಭಾವಿ ಸಭೆ’ ಗುರುವಾರ ನಡೆಯಿತು
ರಾಯಚೂರು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅಧ್ಯಕ್ಷತೆಯಲ್ಲಿ ‘ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದ ಪೂರ್ವಭಾವಿ ಸಭೆ’ ಗುರುವಾರ ನಡೆಯಿತು   

ರಾಯಚೂರು: ನಗರದ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದಲ್ಲಿ ಜನವರಿ 17 ಮತ್ತು 18 ರಂದು ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಅಚ್ಚುಕಟ್ಟಾಗಿ ಆಯೋಜಿಸುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ 2019–20ನೇ ಸಾಲಿನ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತಾಡಿದರು.

ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲು ಜಿಲ್ಲಾಡಳಿತದಿಂದ ಬೇಕಿರುವ ಅಗತ್ಯ ನೆರವನ್ನು ನೀಡಲಾಗುವುದು, ಈ ದಿಸೆಯಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಕ್ರೀಡಾಕೂಟ ಆಯೋಜನೆಗೆ ಕ್ರೀಡಾಂಗಣ ಒದಗಿಸುವಂತೆ ಪತ್ರ ಬರೆಯುವಂತೆ ಸೂಚನೆ ನೀಡಿದರು.

ADVERTISEMENT

ಕ್ರೀಡಾಂಗಣದ ಸುತ್ತಮುತ್ತಲೂ ಸ್ಪಚ್ಚತೆ ಕಾಪಾಡಬೇಕು, ಕುಡಿಯುವ ನೀರಿನ ಸಮರ್ಪಕ ಪೂರೈಕೆ ಮಾಡುವುದು ಸೇರಿದಂತೆ ಕ್ರೀಡಾಕೂಟ ಮುಕ್ತಾಯಗೊಂಡ ಬಳಿಕ ಮೊದಲಿನ ಸ್ಥಿತಿಯಲ್ಲಿಯೇ ಸ್ಪಚ್ಛಪಡಿಸಿಕೊಡಬೇಕೆಂದು ಅವರು ನಗರಸಭೆಯವರಿಗೆ ಸೂಚಿಸಿದರು.

ಈ ಕ್ರೀಡಾಕೂಟಕ್ಕೆ ಖಾಸಗಿ ಕಂಪನಿಗಳು ನಗದುರಹಿತ ಸಹಯೋಗ ನೀಡಬಹುದಾಗಿದೆ. ಆಟಗಾರರಿಗೆ ಟೀಶಾರ್ಟ್, ಕ್ಯಾಪ್‌ಗಳನ್ನು ಪೂರೈಸಿಕೊಡಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಮಾತನಾಡಿ, ಸರ್ಕಾರಿ ನೌಕರರಿಗೆ ಹೊರಾಂಗಣ ಹಾಗೂ ಒಳಾಂಗಣ ಕ್ರೀಡಾಕೂಟಗಳಾದ ಫುಟ್ಬಾಲ್, ವಾಲಿಬಾಲ್, ಹಾಕಿ, ಕಬ್ಬಡ್ಡಿ, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ಕೇರಂ, ಕ್ರಿಕೆಟ್, ಬ್ಯಾಸ್ಕೆಟ್‌ಬಾಲ್, ಚೆಸ್, ಟೆನ್ನಿಕಾಯ್ಟ್, ಥ್ರೋಬಾಲ್ ಸೇರಿದಂತೆ ಅಥ್ಲೆಟಿಕ್ಸ್, ರಿಲೆ ಪಂದ್ಯಗಳು, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹಿಂದೂಸ್ತಾನಿ ಸಂಗೀತ ಮೌಖಿಕ, ಲಘು ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ, ಜಾನಪದ ಗೀತೆ, ಕಥಕ್, ಮಣಿಪುರಿ, ಕೂಚುಪುಡಿ, ಕಥಕಳ್ಳಿ, ಒಡಿಸಿ, ಭರತನಾಟ್ಯ, ಜಾನಪದ ನೃತ್ಯ, ವಾದ್ಯ ಸಂಗೀತ ಸೇರಿದಂತೆ ವಿವಿಧ ರೀತಿಯ ಸಂಗೀತ, ನೃತ್ಯ ಮತ್ತು ನಾಟಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಮಹೆಬೂಬ್ ಪಾಷಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಯಚೂರು ತಾಲ್ಲೂಕು ಕ್ರೀಡಾಧಿಕಾರಿ ಎನ್.ಎಚ್. ಬಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.