ADVERTISEMENT

ಮಳೆಯಿಂದಾದ ಹಾನಿಗೆ ₹61 ಕೋಟಿ ಪರಿಹಾರ

ವಿಡಿಯೋ ಸಂವಾದದಲ್ಲಿ ವಿವರ ನೀಡಿದ ಡಿಸಿ ವೆಂಕಟೇಶ ಕುಮಾರ್

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 16:49 IST
Last Updated 16 ಅಕ್ಟೋಬರ್ 2020, 16:49 IST
ಬೆಂಗಳೂರಿನಿಂದ ಮುಖ್ಯಮಂತ್ರಿ ಆಯೋಜಿಸಿದ್ದ ವಿಡಿಯೋ ಕಾನ್ಫ್‌ರೆನ್ಸ್‌ನಲ್ಲಿ ರಾಯಚೂರು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು
ಬೆಂಗಳೂರಿನಿಂದ ಮುಖ್ಯಮಂತ್ರಿ ಆಯೋಜಿಸಿದ್ದ ವಿಡಿಯೋ ಕಾನ್ಫ್‌ರೆನ್ಸ್‌ನಲ್ಲಿ ರಾಯಚೂರು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು   

ರಾಯಚೂರು: ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಇದೂವರೆಗೂ ₹158 ಕೋಟಿ ಹಾನಿಯಾಗಿದ್ದು, ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸರ್ವ ರೀತಿಯಲ್ಲಿ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದರು.

ಮಳೆಯಿಂದಾಗಿ ಹಾನಿಯಾದವರಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಮಾರ್ಗಸೂಚಿಗಳ ಅನ್ವಯ ಈಗಾಗಲೇ ₹61 ಕೋಟಿ ಪರಿಹಾರ ನೀಡಲಾಗಿದೆ. ಮಳೆಯಿಂದ 487 ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಜೂನ್ 1 ರಿಂದ ಸೆಪ್ಟಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ 440 ಮಿಲಿಮೀಟ್‌ ಮಳೆಯಾಗಿದೆ. ವಾಡಿಕೆಗಿಂತ ಶೇ 32 ರಷ್ಟು ಹೆಚ್ಚು ಮಳೆಯಾಗಿದ್ದು, ಮಳೆಯಿಂದಾಗಿ 18 ಜಾನುವಾರಗಳು ಮೃತಪಟ್ಟಿವೆ ಎಂದರು.

ಇತ್ತೀಚಿಗೆ ಸುರಿದ ಮಳೆಯಿಂದಾಗಿ ಮಾನ್ವಿ ತಾಲ್ಲೂಕಿನಲ್ಲಿ ಶೆಡ್ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮಸ್ಕಿ ಪಟ್ಟಣದ ಹಳ್ಳದಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ದೇವದುರ್ಗ ತಾಲ್ಲೂಕಿನಲ್ಲಿ ಮನೆ ಗೋಡೆ ಕುಸಿದು 8 ಕುರಿಗಳು ಮೃತಪಟ್ಟಿವೆ. ಜಿಲ್ಲೆಯಲ್ಲಿ ಭಾರೀ ಮಳೆ, ಪ್ರವಾಹದಿಂದ ಜೂನ್‍ನಿಂದ ಇದುವರೆಗೂ ಒಟ್ಟು 18 ಜನರು ಮೃತಪಟ್ಟಿದ್ದಾರೆ. ಮೃತ ಎಲ್ಲ ಕುಟಂಬಗಳಿಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ಮಳೆಯಿಂದಾಗಿ ಜಿಲ್ಲೆಯಲ್ಲಿ 22,031 ಹೆಕ್ಟರ್ ಪ್ರದೇಶದಲ್ಲಿ ಕೃಷಿ, 23,745 ಹೆಕ್ಟರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸಿದ ಕಾರಣ ರಾಯಚೂರು ತಾಲ್ಲೂಕಿನ ಗುರ್ಜಾಪುರ, ಡಿ.ರಾಂಪೂರು, ಬೂರ್ದಿಪಾಡು ಮತ್ತು ಅತ್ಕೂರು ಗ್ರಾಮಗಳ 800 ಜನ ಸಂತ್ರಸ್ಥರನ್ನು ಈಗಾಗಲೇ ಸ್ಥಳಾಂತರ ಮಾಡಿ 4 ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ವಿವರಿಸಿದರು.

ಕಳೆದ ಒಂದು ವಾರದ ಹಿಂದೆ ಸುರಿದ ಮಳೆಯಿಂದಾಗಿ ಹಾನಿಯಾಗಿರುವ ಬಗ್ಗೆ ಸರ್ವೆ ನಡೆಯುತ್ತಿದೆ. ಒಂದು ವಾರದಲ್ಲಿ ಎಲ್ಲ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಮಳೆ, ಪ್ರವಾಹ ಎದುರಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪೆÇಲೀಸ್ ಇಲಾಖೆಯ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ನದಿ ತೀರದ ಗ್ರಾಮಗಳ ಜನರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿ, ನದಿ ತೀರದಲ್ಲಿ ಯಾರು ಹೋಗದಂತೆ ನಿರ್ಬಂಧಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಹೆಚ್ಚುವರಿ ಜಿಲ್ಲಾಧಿಕಾರಿ ದುರಗೇಶ, ಉಪವಿಭಾಗಾಧಿಕಾರಿ ಆಯುಕ್ತ ರಾಜೇಶೇಖರ್ ಡಂಬಳ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಗಣಪತಿ ಸಾಕರೆ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು, ಅಗ್ನಿ ಶಾಮಕ ದಳ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.