ADVERTISEMENT

ವ್ಯವಹಾರ ಬಂದ್:ಸಹಕಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 13:03 IST
Last Updated 22 ಏಪ್ರಿಲ್ 2021, 13:03 IST
ರಾಯಚೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ಗುರುವಾರ ಸಭೆ ನಡೆಸಿದರು
ರಾಯಚೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ಗುರುವಾರ ಸಭೆ ನಡೆಸಿದರು   

ರಾಯಚೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೊಂಕು ಹರಡುವುದನ್ನು ನಿಯಂತ್ರಿಸಲು ತಕ್ಷಣದಿಂದ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಇತರೆ ಎಲ್ಲಾ ವಾಣಿಜ್ಯೋದ್ಯಮ, ವ್ಯವಹಾರ ಸ್ಥಗಿತಗೊಳಿಸಿ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳೊಂದಿಗೆ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಾರದ ಹಿಂದೆ 40 ವರದಿಯಾಗುತ್ತಿದ್ದ ಕೋವಿಡ್ ಪಾಸಿಟಿವ್ ಪ್ರಕರಣ ಇಂದು 500 ಗಡಿ ದಾಟಿದೆ. ಇದೇ ಸ್ಥಿತಿ ಇನ್ನೂ ಮುಂದುವರಿದರೆ ವೈದ್ಯಕೀಯ ಸೌಲಭ್ಯ ದೊರೆಯದೇ ಗಂಭೀರ ಸ್ಥಿತಿ ಎದುರಿಸಬೇಕಾಗುತ್ತದೆ. ಸೋಂಕು ಹರಡುವುದನ್ನು ತಡೆಯಲು ಜನರು ಅನಗತ್ಯವಾಗಿ ಮನೆಯಿಂದ ಹೊರಬರಬಾರದು ಅದಕ್ಕಾಗಿ ಅಗತ್ಯ ಸೇವೆಗಳ ಹೊರತು ಇತರೆ ವ್ಯಾಪಾರ, ವಹಿವಾಟು ಸ್ಥಗಿತಗೊಳಿಬೇಕಾಗುತ್ತದೆ. ಕಳೆದ
ವರ್ಷ ಕೊರೊನಾ ವರದಿಯಾದಾಗದ ವಾಣಿಜ್ಯೋದ್ಯಮಿಗಳು, ಕೈಗಾರಿಕೆಗಳು ನೀಡಿದಂತೆ ಈ ಬಾರಿಯೂ ಸಹಕಾರ ನೀಡುವಂತೆ ಕೋರಿದರು.

ADVERTISEMENT

ರೈಸ್‍ಮಿಲ್‍ಗಳು ಶೇ 50 ರಷ್ಟು ಕಾರ್ಮಿಕರನ್ನು ಮಾತ್ರ ಬಳಸಿಕೊಳ್ಳಬೇಕು. ಎಲ್ಲಾ ಕೈಗಾರಿಕೆಗಳು ಸಹ ಇದೇ ನಿಯಮ ಪಾಲಿಸಬೇಕು. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳೆದಲ್ಲ ಅಂಗಡಿಗಳನ್ನು ಮುಚ್ಚಬೇಕು. ಜನರು ಯಾವುದೇ ಕಾರಣಕ್ಕೂ ಸೇರದಂತೆ ತಡೆಯಲು ವಹಿವಾಟು ನಿಲ್ಲಿಸಬೇಕು ಎಂದರು.

ಅಗತ್ಯ ಸೇವೆಗಳಾದ ಖಾಸಗಿ ಆಸ್ಪತ್ರೆಗಳು, ಔಷಧ, ಪೆಟ್ರೋಲ್ ಪಂಪ್, ಕಿರಾಣಿ, ತರಕಾರಿ, ಬ್ಯಾಂಕ್, ಎಟಿಎಂ, ಹೊರ ಜಿಲ್ಲೆಗಳಿಗೆ ಅಕ್ಕಿ ರಫ್ತು ಸೇರಿದಂತೆ ಇತರೆ ಸೇವೆಗಳನ್ನು ಹೊರತು ಪಡಿಸಿ ಉಳಿದ ಸೇವೆಗಳನ್ನು ಮೇ 4ರ ವರೆಗೆ ಬಂದ್‌ ಮಾಡಲಾಗಿದೆ ಎಂದರು.

ಅಕ್ಕಿ ರಫ್ತಿಗೆ ಅನುಕೂಲವಾಗುವಂತೆ ಕಳೆದ ಬಾರಿಯಂತೆ ಈ ಬಾರಿಯೂ ರೈಸ್ ಮಿಲ್‍ಗಳಿಗೆ ಪಾಸುಗಳನ್ನು ನೀಡಲಾಗುವುದು. ಅದಕ್ಕಾಗಿ ಕನಿಷ್ಠ ಸಂಖ್ಯೆಯ ಕಾರ್ಮಿಕರ ಪಟ್ಟಿ ನೀಡಬೇಕು. ಅನಗತ್ಯವಾಗಿ ಇತರೆ ಅಂಗಡಿ ಮುಂಗಟ್ಟುಗಳನ್ನು ತೆರೆಯುವಂತಿಲ್ಲ. ಕಿರಾಣಿ ಅಂಗಡಿಗಳಿಗೆ ಬರುವವರು ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದನ್ನು ಮೇಲ್ವಿಚಾರಣೆ ಮಾಡಲು ಸೆಕ್ಟರ್ ಅಧಿಕಾರಿಗಳ ತಂಡವನ್ನು ರಚಿಸಲಾಗುವುದು. ಮಾಸ್ಕ್ ಹಾಕದಿದ್ದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಅಂಗಡಿಯವರು ಜಾಗೃತಿ ಮೂಡಿಸಬೇಕು. ಎಪಿಎಂಸಿಯಲ್ಲಿಯೂ ಇದೇ ರೀತಿ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಕಮಿಷನ್ ಎಜೆಂಟರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ, ಹರವಿ ನಾಗನಗೌಡ, ವಿಶ್ವನಾಥ ಪಾಟೀಲ ಕ್ಯಾದಿಗೇರಾ ಸೇರಿದಂತೆ ವಿವಿಧ ವಾಣಿಜ್ಯೋಧ್ಯಮಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.