ADVERTISEMENT

ಕಪ್ಪು ಶಿಲೀಂಧ್ರ ಚಿಕಿತ್ಸೆಗೆ 28 ಹಾಸಿಗೆಗಳು ಲಭ್ಯ

ರಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 25 ಮೇ 2021, 15:23 IST
Last Updated 25 ಮೇ 2021, 15:23 IST
ರಾಯಚೂರಿನ ರಿಮ್ಸ್‌ ಆಸ್ಪತ್ರೆಯ ಕಪ್ಪು ಶಿಲೀಂಧ್ರ ವಾರ್ಡ್‌ಗೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ಮಂಗಳವಾರ ಭೇಟಿನೀಡಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದ ಮಾಹಿತಿ ಪಡೆದರು 
ರಾಯಚೂರಿನ ರಿಮ್ಸ್‌ ಆಸ್ಪತ್ರೆಯ ಕಪ್ಪು ಶಿಲೀಂಧ್ರ ವಾರ್ಡ್‌ಗೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ಮಂಗಳವಾರ ಭೇಟಿನೀಡಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದ ಮಾಹಿತಿ ಪಡೆದರು    

ರಾಯಚೂರು: ಕಪ್ಪು ಶಿಲೀಂಧ್ರ (ಬ್ಲಾಕ್ ಫಂಗಸ್) ರೋಗಕ್ಕೆ ಚಿಕಿತ್ಸೆ ನೀಡಲು ಜಿಲ್ಲೆಯ ರಿಮ್ಸ್ ಆಸ್ಪತ್ರೆಯಲ್ಲಿ 28 ಹಾಸಿಗೆಗಳ ಎರಡು ವಾರ್ಡ್‌ಗಳನ್ನು ಸಿದ್ದಪಡಿಸಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ತಿಳಿಸಿದರು.

ನಗರದ ರಿಮ್ಸ್ ಆಸ್ಪತ್ರೆಯ 5ನೇ ಮಹಡಿಯಲ್ಲಿ ಕಪ್ಪು ಶಿಲೀಂಧ್ರ ರೋಗದ ಚಿಕಿತ್ಸೆಗಾಗಿ ಮೀಸಲಿಟ್ಟ ತಲಾ 14 ಹಾಸಿಗೆಗಳ ಎರಡು ವಾರ್ಡ್‌ಗಳಿಗೆ ಮಂಗಳವಾರ ಭೇಟಿ ನೀಡಿ ಸೋಂಕಿತರ ಆರೋಗ್ಯ ಹಾಗೂ ಚಿಕಿತ್ಸೆ ಕುರಿತಂತೆ ಮಾತುಕತೆ ನಡೆಸಿದರು.

ಪುರಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ವಾರ್ಡ್‌ ಮಾಡಲಾಗಿದೆ. ಜಿಲ್ಲೆಯಲ್ಲಿ ಇದೂವರೆಗೆ ಏಳು ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ ಎರಡು ಪ್ರಕರಣಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದರು.

ADVERTISEMENT

ಕಪ್ಪು ಶಿಲೀಂಧ್ರ ರೋಗಕ್ಕೆ ಎಂಪೋಟೆರೆಷಿನ್‌ ಔಷಧ ಬಳಕೆಯಾಗುತ್ತಿದ್ದು, ಅದನ್ನು ಜಿಲ್ಲೆಗೆ ಒದಗಿಸುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದ್ದು, 50 ವೈಲ್ಸ್ ಔಷಧ ಜಿಲ್ಲೆಗೆ ಹಂಚಿಕೆ ಮಾಡಲಾಗಿದೆ. ಅದು ಮಂಗಳವಾರವೆ ಜಿಲ್ಲೆಗೆ ಬರಲಿದೆ. ಎಂಪೋಟೆರೆಷಿನ್‌ ಅಲ್ಲದೇ ಎರಡನೇ ಹಂತದ ಕ್ಲೂಕೋನಿಜೆನ್ ಎಂಬ ಔಷಧದ ಮೂಲಕವೂ ಕಪ್ಪು ಶಿಲೀಂಧ್ರಕ್ಕೆ ಚಿಕಿತ್ಸೆ ನೀಡಬಹುದು. ಅದು ಜಿಲ್ಲೆಯಲ್ಲಿ ಲಭ್ಯವಿದೆ. ಅದನ್ನು ಬಳಸಿಕೊಂಡು ರಿಮ್ಸ್ ತಜ್ಞ ವೈದ್ಯರು ಈ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿಸಿದರು.

ಕಳೆದ ವಾರದಿಂದ ಚಿಕಿತ್ಸೆ ನೀಡುತ್ತಿದ್ದು, ಜಿಲ್ಲೆಯಲ್ಲಿ ಎಲ್ಲೆಯೇ ಕಪ್ಪು ಶಿಲೀಂಧ್ರ ರೋಗಿಗಳು ಪತ್ತೆಯಾದಲ್ಲೀ ಅವರನ್ನು ರಿಮ್ಸ್‌ನಲ್ಲಿರುವ ಪ್ರತ್ಯೇಕ ವಾರ್ಡ್‌ಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುವುದು. ಈ ಬಗ್ಗೆ ಐಎಎಂಯೊಂದಿಗೆ ಸಭೆ ನಡೆಸಿ, ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸೂಚಿಸಲಾಗಿದೆ ಎಂದರು.

ಪ್ರತಿರೋಗಿಯ ಚಿಕಿತ್ಸೆಗೆ 40 ರಿಂದ 50 ಎಂಪೋಟೆರೆಷಿನ್‌ ವೈಲ್ಸ್ ಬೇಕಿರುತ್ತದೆ. ಈ ರೋಗ ಬೇಗ ಪತ್ತೆಯಾದಲ್ಲೀ ಅದನ್ನು ಶೀಘ್ರವಾಗಿ ಗುಣಪಡಿಸಬಹುದು. ಜಿಲ್ಲೆಗೆ ಒಟ್ಟು 350 ವಯಲ್ಸ್‌ ಬೇಡಿಕೆ ಸಲ್ಲಿಸಲಾಗಿದೆ. ಎರಡನೇ ಹಂತದ ಔಷಧ ಜಿಲ್ಲೆಯಲ್ಲಿಯೇ ಲಭ್ಯವಿದೆ. ಆ ಔಷಧದೊಂದಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಬೇಕು. ಆಗ ರೋಗಿಗಳು ಚೇತರಿಕೆಯಾಗುತ್ತಾರೆ ಎಂದು ಹೇಳಿದರು.

ಜಿಲ್ಲೆಯ ಆಸ್ಪತ್ರೆಗಳಲ್ಲಿ ಸಾಕಷ್ಟು ವೆಂಟಿಲೇಟರ್‌ಗಳಿದ್ದು, ಹೊಸದಾಗಿ ಇನ್ನೂ 50 ವೆಂಟಿಲೇಟರ್‌ಗಳನ್ನು ತರಿಸಲಾಗಿದೆ. ಅವುಗಳನ್ನು ಅಳವಡಿಸುವ ಕಾರ್ಯ ನಡೆಯುತ್ತದೆ. ಕೋವಿಡ್ ಮೂರನೇ ಅಲೆ ಬಂದರೂ ಸಿದ್ದರಾಗಿರಬೇಕು ಎನ್ನುವ ಕಾರಣದಿಂದ ಮುನ್ನೆಚ್ಚರಿಕಾ ಕ್ರಮವಾಗಿ 20 ಕೆ.ಎಲ್ ಆಕ್ಸಿಜನ್ ಟ್ಯಾಂಕ್ ಅಳವಡಿಸಲಾಗುತ್ತಿದೆ. ಈಗಾಗಲೇ ಬಂದಿದ್ದು, ಎರಡು ದಿನಗಳಲ್ಲಿ ಅಳವಡಿಸಲಾಗುವುದು. ಜಿಲ್ಲೆಯಲ್ಲಿ ಒಟ್ಟಾರೆ 5 ಆಕ್ಸಿಜನ್ ಟ್ಯಾಂಕ್‌ಗಳಲ್ಲಿ 76 ಕೆ.ಎಲ್ ಆಕ್ಸಿಜನ್ ಸಂಗ್ರಹವಾಗಲಿದ್ದು, ಪ್ರತಿ ದಿನಕ್ಕೆ 15 ಕೆ.ಎಲ್. ಖರ್ಚಾದರೂ ಮುಂದಿನ 5 ದಿನಕ್ಕೆ ಹೆಚ್ಚುವರಿಯಾಗಿ ವೈದ್ಯಕೀಯ ಆಮ್ಲಜನಕ ಲಭ್ಯವಾಗಲಿದೆಎಂದು ತಿಳಿಸಿದರು.

ಕೋವಿಡ್ ಮೂರನೇ ಅಲೆ ವೇಳೆ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ರಿಮ್ಸ್ ಆಸ್ಪತ್ರೆಯಲ್ಲಿ 50 ಹಾಸಿಗೆಯ ಐಸಿಯು ಬೆಡ್ ಹಾಗೂ 200 ಹಾಸಿಗೆಗಳ ಮಕ್ಕಳ ವಾರ್ಡ್ ನಿರ್ಮಾಣಕ್ಕೆ ರಿಮ್ಸ್ ನಿರ್ದೇಶಕರಿಗೆ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ. ಅದಕ್ಕೆ ಅಗತ್ಯವಿರುವ ಉಪಕರಣಗಳು, ಪಿಡಿಯಾಟ್ರಿಕ್‌ಗಳು, ತರಬೇತಿ ಪಡೆದ ನರ್ಸ್‌ಗಳು, ಫಾರ್ಮಾಸಿಸ್ಟ್, ಟೆಕ್ನಿಷಿಯನ್ಸ್, ಗ್ರೂಪ್ ಡಿ ಸಿಬ್ಬಂದಿ ಬೇಕು. ಅವುಗಳ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವಿಜಯ ಶಂಕರ್, ರಿಮ್ಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಬಸವರಾಜ ಪಾಟೀಲ್, ಡಾ. ವಾಸುದೇವ, ನರ್ಸಿಂಗ್ ಆಫಿಸರ್ ಸುಲೋಚನಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.