ADVERTISEMENT

39 ಕೆರೆಗಳ ಹೂಳೆತ್ತಲು ಕ್ರಮ: ಬಿ.ಶರತ್‌

ತಾಲ್ಲೂಕಿನ ಕಟ್ಲಟ್ಕೂರು ಕೆರೆಗೆ ಜಿಲ್ಲಾಧಿಕಾರಿ ಭೇಟಿ 30ರಂದು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 14:22 IST
Last Updated 29 ಏಪ್ರಿಲ್ 2019, 14:22 IST
ರಾಯಚೂರಿನಲ್ಲಿ ಜಿಲ್ಲಾಧಿಕಾರಿ ಬಿ.ಶರತ್ ಅಧ್ಯಕ್ಷತೆಯಲ್ಲಿ ಕೆರೆಗಳ ಹೂಳೆತ್ತುವ ಕುರಿತ ಸಭೆ ಸೋಮವಾರ ನಡೆಯಿತು
ರಾಯಚೂರಿನಲ್ಲಿ ಜಿಲ್ಲಾಧಿಕಾರಿ ಬಿ.ಶರತ್ ಅಧ್ಯಕ್ಷತೆಯಲ್ಲಿ ಕೆರೆಗಳ ಹೂಳೆತ್ತುವ ಕುರಿತ ಸಭೆ ಸೋಮವಾರ ನಡೆಯಿತು   

ರಾಯಚೂರು: ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಜಿಲ್ಲಾಡಳಿತದಿಂದ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ಜಿಲ್ಲೆಯಲ್ಲಿನ ಕೆರೆಗಳ ಹೂಳೆತ್ತುವ ಕಾಮಗಾರಿಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೆರೆಗಳ ಹೂಳೆತ್ತುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆರೆಗಳ ಹೂಳೆತ್ತುವ ಮೊದಲ ಹಂತದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, 39 ಕೆರೆಗಳ ಹೂಳೆತ್ತಲಾಗುತ್ತಿದೆ. 9 ಕೆರೆಯ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದ್ದು, ತಾಲ್ಲೂಕಿನ ಕಟ್ಲಟ್ಕೂರು ಹಾಗೂ ಲಿಂಗಸುಗೂರು ತಾಲ್ಲೂಕಿನ ಉಪ್ಪಾರ ನಂದಿಹಾಳ ಕೆರೆಯ ಹೂಳೆತ್ತುವ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದರು.

ADVERTISEMENT

4.73 ಲಕ್ಷ ಕ್ಯೂಬಿಕ್ ಮೀಟರ್ ಹೂಳನ್ನು ತೆಗೆಯಲಾಗಿದೆ. ಪ್ರತಿದಿನ 1500 ರಿಂದ 2 ಸಾವಿರ ಟ್ರ್ಯಾಕ್ಟರ್ ಹೂಳು ರೈತರು ಹೊಲಗಳಿಗೆ ಕೊಂಡೊಯ್ಯುತ್ತಿದ್ದಾರೆ. ಈ ಹೂಳಿನಿಂದ ಭೂಮಿಯ ಫತವತ್ತತೆ ಹೆಚ್ಚಾಗಲಿದೆ. ರೈತರ ಸಹಕಾರದಿಂದ ಹೂಳೆತ್ತುವ ಕಾರ್ಯಕ್ಕೆ ಹುರುಪು ಬಂದಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್ ಅತುಲ್ ಇದ್ದರು.

ಕೆರೆಗೆ ಭೇಟಿ:

ತಾಲ್ಲೂಕಿನ ಕಟ್ಲಟ್‍ಕೂರ್ ಕೆರೆಯ ಹೂಳೆತ್ತುವ ಕಾರ್ಯ ಪರಿಶೀಲಿಸಲು ಜಿಲ್ಲಾಧಿಕಾರಿ ಬಿ.ಶರತ್ ಮತ್ತು ಹಿರಿಯ ಅಧಿಕಾರಿಗಳು ಏಪ್ರಿಲ್ 30ರಂದು ಭೇಟಿ ನೀಡಲಿದ್ದಾರೆ.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ, ಭಾರತೀಯ ಜೈನ್ ಸಂಘಟನೆಯ ರಾಜ್ಯ ಸಂಘಟನಾಧಿಕಾರಿ ಅಜಿತ್ ರಾಜ್ ಸಂಚಿತ್, ಕಮಲ್ ಕುಮಾರ್, ಪುಣೆಯ ಕಾರ್ಯಕ್ರಮ ನಿರ್ದೇಶಕ ನಂದಕಿಶೋರ್, ಜಿಲ್ಲಾ ಸಮನ್ವಯಾಧಿಕಾರಿ ಸಂಜಯ್, ಯೋಜನಾ ನಿರ್ದೇಶಕ ಸಂಜಯ್ ಇತರರು ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.