ADVERTISEMENT

₹4 ಸಾವಿರ ಕೋಟಿ ಅನುದಾನ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 15:48 IST
Last Updated 5 ಮಾರ್ಚ್ 2021, 15:48 IST
ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ರಾಯಚೂರಿನ ಟಿಪ್ಪುಸುಲ್ತಾನ ಉದ್ಯಾನದಲ್ಲಿ ಶುಕ್ರವಾರ ಧರಣಿ ನಡೆಸಿದರು
ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ರಾಯಚೂರಿನ ಟಿಪ್ಪುಸುಲ್ತಾನ ಉದ್ಯಾನದಲ್ಲಿ ಶುಕ್ರವಾರ ಧರಣಿ ನಡೆಸಿದರು   

ರಾಯಚೂರು: ಹಿಂದುಳಿದ ಸಮುದಾಯಗಳಿಗೆ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ₹4 ಸಾವಿರ ಕೋಟಿ ಅನುದಾನ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ನಗರದ ಟಿಪ್ಪುಸುಲ್ತಾನ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಇತ್ತೀಚಿನ ದಿನಗಳಲ್ಲಿ ಹಲವು ಸಮಾಜದವರು ಮೀಸಲಾತಿ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಆದರೆ ಸರ್ಕಾರದ ಬಳಿ ವಿವಿಧ ಸಮಾಜಗಳ ನಿಖರ ಮಾಹಿತಿಯಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯವರ ಸರ್ಕಾರದ ಅವಧಿಯಲ್ಲಿ ಜಾತಿ ಆಧಾರಿತ ಜನಗಣತಿ ಮಾಡಲು ಆಯೋಗ ನೇಮಕ ಮಾಡಲಾಯಿತು. ಆದರೆ, ಇದುವರೆಗೂ ಆಯೋಗದ ವರದಿಯನ್ನು ಬಹಿರಂಗ ಪಡಿಸಿಲ್ಲ. ಕೂಡಲೇ ವರದಿಯನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸ ಅವರ ನೆನೆಪಿಗಾಗಿ ಹಾಗೂ ಹಿಂದುಳಿದ ಸಮಾಜದ ಸಭೆ, ಸಮಾರಂಭ ನಡೆಸಲು ಅಂಬೇಡ್ಕರ್ ಭವನ ಮಾದರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ದೇವರಾಜ ಅರಸು ಭವನ ನಿರ್ಮಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಭವನ ನಿರ್ಮಾಣಕ್ಕೆ ಈಗಾಗಲೇ 1/2 ಎಕರೆ ನಿವೇಶನವಿದ್ದು ಭವನ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಈಗಾಗಲೇ ಮಂಜೂರಾದ ವಿದ್ಯಾರ್ಥಿ ವಸತಿ ನಿಲಯ, ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಬೇಕು. ಒಟ್ಟು ₹177 ಕೋಟಿ 2020–21 ಆಯವ್ಯಯದಲ್ಲಿ ಅನುದಾನ ಒದಗಿಸಲಾಗಿತ್ತು. ಸುಮಾರು 205 ಅತಿ ಹಿಂದುಳಿದ ಜಾತಿಗಳಿಗೆ ₹177 ಕೋಟಿ ಅನುದಾನ ಬಿಡುಗಡೆ ಮಾಡಿದರೆ ಶೈಕ್ಷಣಿಕ, ಸಾಮಾಜಿಕವಾಗಿ ಮುಂದುವರಿದ ಲಿಂಗಾಯತರಿಗೆ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ ₹500 ಕೋಟಿ ಅನುದಾನ ನೀಡಲಾಗಿದೆ. ಹಿಂದುಳಿದ ಸಮುದಾಯದ ಅಭಿವೃದ್ಧಿ ನಿಗಮಗಳಿಗೆ ₹4 ಸಾವಿರ ಕೋಟಿ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ, ಖಾಜನಗೌಡ, ಜಿ.ಸುರೇಶ, ಶಿವಮೂರ್ತಿ, ಬಿ.ಬಸವರಾಜ, ಕೆ.ಬಸವಂತಪ್ಪ, ಹನುಮಂತು ಯಾದವ್, ಕಡಗೋಳ ಶರಣಪ್ಪ, ವಿಜಯಭಾಸ್ಕರ್, ಶ್ರೀನಿವಾಸ ಪತಂಗೆ, ಶರಣಪ್ಪ ಪೂಜಾರಿ, ಮಲ್ಲೇಶ, ಯಂಕೋಬ, ಕರಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.