ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯ: ಆಜಾದ್‌ ನಗರದ ರಸ್ತೆ ದುರಸ್ತಿಗೆ ಆಗ್ರಹ

ಸ್ಥಳೀಯರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 8:20 IST
Last Updated 6 ಸೆಪ್ಟೆಂಬರ್ 2021, 8:20 IST
ರಾಯಚೂರಿನ ಆಜಾದ್ ನಗರದಲ್ಲಿ ಚರಂಡಿ ನಿರ್ಮಾಣಕ್ಕೆ ಗುಂಡಿ ತೋಡಿ ಹಾಗೆ ಬಿಟ್ಟಿರುವುದು
ರಾಯಚೂರಿನ ಆಜಾದ್ ನಗರದಲ್ಲಿ ಚರಂಡಿ ನಿರ್ಮಾಣಕ್ಕೆ ಗುಂಡಿ ತೋಡಿ ಹಾಗೆ ಬಿಟ್ಟಿರುವುದು   

ರಾಯಚೂರು: ಇಲ್ಲಿನ ಆಜಾದ್ ನಗರದ ರಸ್ತೆಯು ಅನೇಕ ವರ್ಷಗಳಿಂದ ಹದಗೆಟ್ಟಿದ್ದು, ಸಂಬಂಧಿಸಿದವರು ದುರಸ್ತಿ ಮಾಡದೇ ಇರುವುದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿಷ್ಠಿತರು, ಮಧ್ಯಮ ವರ್ಗದವರು ವಾಸವಾಗಿರುವ ಈ ಬಡವಾಣೆಯಲ್ಲಿ ಕೆಲವೆಡೆ ಸಿ.ಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ, ಮಾವಿನಕೆರೆ ಉದ್ಯಾನದ ಮುಂಭಾಗದ ಒಳ ರಸ್ತೆ ನಿರ್ಮಾಣ ಮಾಡದೇ ನಿರ್ಲಕ್ಷ್ಯ ವಹಿಸಲಾಗಿದೆ.

ಹದಗೆಟ್ಟ ರಸ್ತೆಯಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ. ಹಳೆಯ ರಸ್ತೆಯ ಡಾಂಬರ್ ಕಿತ್ತು ಕಲ್ಲುಗಳು ಹೊರಗೆ ಬಂದಿವೆ. ಹಲವೆಡೆ ತಗ್ಗು ಗುಂಡಿಗಳು ನಿರ್ಮಾಣವಾಗಿವೆ. ಮಳೆಗಾಲದಲ್ಲಿ ರಾಡಿಯಾಗಿ ಸಮಸ್ಯೆಯಾಗುತ್ತಿದೆ. ಬಡಾವಣೆಯ ಹಲವೆಡೆ ಸಿ.ಸಿ ರಸ್ತೆ ನಿರ್ಮಾಣ ಮಾಡಿ ಈ ಭಾಗದಲ್ಲಿ ರಸ್ತೆ ನಿರ್ಮಾಣ ಮಾಡದೇ ತಾರತಮ್ಯ ಮಾಡಿದ್ದು ಸರಿಯಲ್ಲ. ಕೂಡಲೇ ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸುತ್ತಾರೆ.

ADVERTISEMENT

ಚರಂಡಿ ನಿರ್ಮಾಣಕ್ಕೆ ನಿರ್ಲಕ್ಷ್ಯ: ಆಜಾದ್ ನಗರದ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣಕ್ಕೆ ರಸ್ತೆ ಅಗೆದು ಹಾಗೆ ಬಿಡಲಾಗಿದೆ. ಚರಂಡಿ ಕಾಮಗಾರಿ ಪೂರ್ಣಗೊಳಿಸದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ಇಲ್ಲಿಂದ ವಾಹನ ಸವಾರರು ಎಚ್ಚರ ತಪ್ಪಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ರಾತ್ರಿ ವೇಳೆ ಸಂಚರಿಸುವಾಗ ಜಾಗೃತಿಯಿಂದ ತೆರಳಬೇಕಿದೆ.

ಕಳೆದ ಮೂರು ತಿಂಗಳ ಹಿಂದೆ ಅಗೆದ ರಸ್ತೆ ಚರಂಡಿ ನಿರ್ಮಿಸದೇ ಹಾಗೆ ಬಿಡಲಾಗಿದೆ. ಈ ಬಗ್ಗೆ ನಗರಸಭೆ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಚಿಕ್ಕ ಕೆಲಸಕ್ಕೆ ಇಷ್ಟೊಂದು ನಿರ್ಲಕ್ಷ್ಯ ವಹಿಸಿದಲ್ಲಿ ಬಡಾವಣೆ, ನಗರ ಅಭಿವೃದ್ಧಿ ಆಗುವುದಾದರೆ ಹೇಗೆ ಎಂದು ಇಲ್ಲಿನ ನಿವಾಸಿ ಈರಣ್ಣ ಅವರು ಅಳಲು ತೋಡಿಕೊಂಡರು.

ಬಿಟಿ ರಸ್ತೆಗೆ ನಿರ್ಮಾಣಕ್ಕೆ ₹ 45 ಲಕ್ಷ ಶಾಸಕರ ಅನುದಾನದ ಎಸ್ಟಿಮೇಟ್ ಆಗಿತ್ತು. ಟೆಂಡರ್ ನೀಡುವ ಹಂತದಲ್ಲಿರುವಾಗ ಶಾಸಕರು ಮನ್ಸಲಾಪುರ ರಸ್ತೆಗೆ ಸ್ಥಳಾಂತರ ಮಾಡಿಕೊಂಡಿದ್ದಾರೆ. ಅವರು ಕೊಟ್ಟ ಅನುದಾನ ಅವರೇ ವಾಪಸ್ ಪಡೆದಿದ್ದಾರೆ. ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತಿಲ್ಲ. ಶೀಘ್ರವೇ ಮೋರಂ ಹಾಕಿ ದುರಸ್ತಿಗೊಳಿಸಲಾಗಿವುದು ಎಂದು ನಗರಸಭೆ ಸದಸ್ಯ ರಮೇಶ .ಬಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.