ಲಿಂಗಸುಗೂರು: ನಾರಾಯಣಪುರ ಬಲದಂಡೆ ಮತ್ತು ರಾಂಪುರ ಯೋಜನೆ ಕಾಲುವೆಗಳಿಗೆ ಏಪ್ರಿಲ್ 20ರವರೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಸೋಮವಾರ ತಾಲ್ಲೂಕಿನ ಗುರುಗುಂಟಾ ಗ್ರಾಮದಿಂದ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿವರೆಗೆ 20ಕ್ಕೂ ಟ್ರ್ಯಾಕ್ಟರ್‌ಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಉಪವಿಭಾಗಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕುಪ್ಪಣ್ಣ ಮಾಣಿಕ್, ‘ನಾರಾಯಣಪುರ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಿದೆ. ಆದರೂ ವಾರಬಂಧಿ ಪದ್ಧತಿಯಡಿಯಲ್ಲಿ ಏ.20ರವರೆಗೆ ಕಾಲುವೆಗಳಿಗೆ ನೀರು ಹರಿಸಲು ಅಧಿಕಾರಿಗಳು ನೆಪಗಳನ್ನು ಹೇಳುತ್ತಿದ್ದಾರೆ. ಇದು ರೈತರಿಗೆ ಮಾಡುತ್ತಿರುವ ಮೋಸವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಸರ್ಕಾರದ ಯಾವುದೇ ಆದೇಶವಿಲ್ಲದೇ ಜಲಾಶಯದಿಂದ ತೆಲಂಗಾಣಕ್ಕೆ ನೀರು ಹರಿಸಲಾಗಿದೆ. ಇಲ್ಲಿನ ರೈತರು ಇದೇ ಜಲಾಶಯದ ನೀರನ್ನು ನೆಚ್ಚಿ ಬೆಳೆ ಬೆಳೆದಿದ್ದಾರೆ. ಇದೀಗ ನೀರಿಲ್ಲದೆ ಬೆಳೆ ಒಣಗುತ್ತಿದ್ದರೂ ಇದರ ಬಗ್ಗೆ ಗಮನ ಹರಿಸದ ಜಲಾಶಯದ ಅಧಿಕಾರಿಗಳು ಕೈಗಾರಿಕೆಗಳ ಹಿತ ಕಾಯಲು ರಾತ್ರೋರಾತ್ರಿ ನೀರು ಹರಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಕಳ್ಳತನದಿಂದ ನೀರು ಹರಿಸುವುದನ್ನು ಬಿಡಬೇಕು. ಇಲ್ಲದಿದ್ದರೆ ರೈತರ ಶಕ್ತಿ ತೋರಿಸಬೇಕಾಗುತ್ತದೆ. ತಾಲ್ಲೂಕಿನ ಅಧಿಕಾರಿಗಳು ನೀರಿಲ್ಲದೆ ಬೆಳೆಗಳು ಯಾವ ಸ್ಥಿತಿಯಲ್ಲಿವೆ, ಇಲ್ಲಿನ ರೈತರ ಪರಿಸ್ಥಿತಿ ಬಗ್ಗೆ ಜಲಾಶಯದ ಅಧಿಕಾರಿಗಳಿಗೆ ವಿವರಿಸಿ ಏಪ್ರಿಲ್ 20ರವರೆಗೆ ಕಾಲುವೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಲಾಗುವುದು’ ಎಂದು ಎಚ್ಚರಿಸಿದರು.
ರೈತರ ಮನವಿ ಆಲಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ‘ರೈತ ಸಂಘದ ಪದಾಧಿಕಾರಿಗಳು ನೀರಿಗಾಗಿ ಮಾರ್ಚ್ 8ರಿಂದ ಹೋರಾಟ ನಡೆಸುತ್ತಿರುವ ಬಗ್ಗೆ ಕೃಷ್ಣಾ ನೀರಾವರಿ ಸಲಹಾ ಸಮಿತಿಗೆ ಗಮನಕ್ಕೆ ತಂದಿರುವೆ. ಮಾರ್ಚ್ 11ರಂದು ನಡೆಯುವ ಸಭೆಯಲ್ಲಿ ಕಾಲುವೆಗಳಿಗೆ ನೀರು ಹರಿಸುವ ಬಗ್ಗೆ ತೀರ್ಮಾನ ತೆಗದುಕೊಳ್ಳಲಾಗುತ್ತಿದೆ. ರೈತರು ಮಾರ್ಚ್ 11ರಂದು ಆಯೋಜಿಸಿರುವ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟ ಕೈಬಿಡಬೇಕು’ ಎಂದು ಕೋರಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಜಾಗರಿನಂದಿಹಾಳ, ತಾಲ್ಲೂಕು ಘಟಕದ ಅಧ್ಯಕ್ಷ ವೈ.ದುರ್ಗಾಪ್ರಸಾದ, ನಂದೇಶ ನಾಯಕ, ರಾಮಣ್ಣ ಆಡಿಕೇರ, ಬಸಣ್ಣ ಕೋಠಾ, ಬಸವರಾಜ ಈಚನಾಳ, ಹೊಳೆಯಪ್ಪ, ಬಸವರಾಜ ಗೌಡೂರು, ಹನುಮಗೌಡ, ಹನುಮಂತ, ಲಾಲಸಾಬ್, ಲಕ್ಷ್ಮಿ ನಾರಾಯಣ, ಶಿವಣ್ಣ, ಕಿರಣ, ಮಹ್ಮದ್ ಖಾಜಾಸಾಬ್, ಬಸಣ್ಣ, ಬಸವರಾಜ, ಆದಪ್ಪ ರಾಯದುರ್ಗ, ಮಲ್ಲಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.