ADVERTISEMENT

ರಾಯಚೂರು: ಆರ್‌ಟಿಪಿಎಸ್ ಮಹಿಳಾ‌ ಅಧಿಕಾರಿಗೆ ತಳ್ಳಿದ ದುಷ್ಕರ್ಮಿ!

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 6:02 IST
Last Updated 18 ಫೆಬ್ರುವರಿ 2021, 6:02 IST
ಮಹಿಳಾ ಅಧಿಕಾರಿಯನ್ನು ಹಿಂದಿನಿಂದ ತಳ್ಳಿರುವುದು–ವಿಡಿಯೊ ಸ್ಕ್ರೀನ್‌ ಶಾಟ್‌
ಮಹಿಳಾ ಅಧಿಕಾರಿಯನ್ನು ಹಿಂದಿನಿಂದ ತಳ್ಳಿರುವುದು–ವಿಡಿಯೊ ಸ್ಕ್ರೀನ್‌ ಶಾಟ್‌   

ರಾಯಚೂರು: ತಾಲ್ಲೂಕಿನ‌ ದೇವಸುಗೂರು‌ ಗ್ರಾಮ ಪಂಚಾಯಿತಿಯಲ್ಲಿ ಕರೆದಿದ್ದ ಆರ್‌ಟಿಪಿಎಸ್ ಅಧಿಕಾರಿಗಳ ಸಭೆಯಲ್ಲಿ ‌ಭಾಗಿಯಾಗಿದ್ದ ಹಾರುಬೂದಿ ವಿಭಾಗದ ಅಧಿಕಾರಿ ಪ್ರೇಮಲತಾ ಜಗದಾಳ ಅವರನ್ನು ಹಿಂಭಾಗದಿಂದ ತಳ್ಳಿ ಅಪಮಾನಿಸಿದ ಘಟನೆ ಸೋಮವಾರ ನಡೆದಿದ್ದು, ಅದರ ವಿಡಿಯೋ‌ ವೈರಲ್‌ ಆಗಿದೆ.

ಸಭೆಯಲ್ಲಿದ್ದ ಗ್ರಾಪಂ ಸದಸ್ಯರು ಒಟ್ಟೊಟ್ಟಿಗೆ ವಾಗ್ವಾದ ನಡೆಸಿದ್ದಾರೆ. ಕೆಲವು ಸದಸ್ಯರು ಪ್ರೇಮಲತಾ ಅವರನ್ನು ಹಾರುಬೂದಿ ವಿಷಯದ ಬಗ್ಗೆ ಏರುದನಿಯಲ್ಲಿ ಪ್ರಶ್ನಿಸುತ್ತಿದ್ದಾಗ, ಅವರು ಆಸನದಿಂದ ಎದ್ದುನಿಂತು ಮಾತು ಆಲಿಸುತ್ತಿದ್ದರು. ಪ್ರೇಮಲತಾ ಅವರ ಆಸನ ಹಿಂಭಾಗ ನಿಂತಿದ್ದವರ ಪೈಕಿ ಒಬ್ಬ ವ್ಯಕ್ತಿ ಬೆನ್ನಮೇಲೆ ಕೈ ಇಟ್ಟು ಮುಂದೆ ತಳ್ಳಿರುವುದು ವಿಡಿಯೊದಲ್ಲಿದೆ. ಕೂಡಲೇ ಪ್ರತಿರೋಧ ವ್ಯಕ್ತಪಡಿಸಿದ ಪ್ರೇಮಲತಾ ಅವರಿಗೆ 'ನಾನಲ್ಲ... ನಾನವನಲ್ಲ' ಎಂದು ಸದಸ್ಯರು ಜಾರಿಕೊಂಡರು. ಇದ್ದಕ್ಕಿದ್ದಂತೆ ಪ್ರೇಮಲತಾ ಅವರನ್ನು ಸಭೆಯಿಂದ ಕೈ ಹಿಡಿದು ಹೊರ ಕಳುಹಿಸಲಾಯಿತು.

ಆರ್‌ಟಿಪಿಎಸ್ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಿದ್ದ ಸಭೆಯ ಅಧ್ಯಕ್ಷತೆಯನ್ನು ಶಾಸಕ ಡಾ.ಶಿವರಾಜ ಪಾಟೀಲ ವಹಿಸಿದ್ದರು.

ADVERTISEMENT

ಸಭೆಯಲ್ಲಿದ್ದ ಕೆಪಿಸಿಎಲ್ ನಾಮನಿರ್ದೇಶಕ ಸದಸ್ಯ ಶ್ರೀನಿವಾಸರೆಡ್ಡಿ ಅವರು ತಮ್ಮ ಆಸನದಿಂದ ಮೇಲೆದ್ದು ಪ್ರೇಮಲತಾ ಅವರತ್ತ ಕೈ ತೋರಿಸಿಕೊಂಡು ಏರುದನಿಯಲ್ಲಿ ಮಾತನಾಡುತ್ತ ಅವರತ್ತ ಹೋಗಿದ್ದಾರೆ. ಕೂಡಲೇ ಅವರನ್ನು ತಡೆಯಲಾಗಿದೆ.

ಜಿಲ್ಲೆಯಲ್ಲಿ 55 ಸದಸ್ಯರನ್ನು ಹೊಂದಿರುವ ಅತಿದೊಡ್ಡ ಗ್ರಾಮ ಪಂಚಾಯಿತಿಯು ಆಡಳಿತ ಬಿಜೆಪಿ ಪಾಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಸಮಾರಂಭ ಮುಕ್ತಾಯದ ಬಳಿಕ, ಆರ್‌ಟಿಪಿಎಸ್ ಅಧಿಕಾರಿಗಳ‌ ಸಭೆ ಕರೆಯಲಾಗಿತ್ತು.

ಶಕ್ತಿನಗರವು (ಆರ್‌ಟಿಪಿಎಸ್) ದೇವಸುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.