ದೇವದುರ್ಗ: ‘ವಾಲ್ಮೀಕಿ ಸಮಾಜದ ಹೋರಾಟ ಸರ್ಕಾರದ ವಿರುದ್ಧವೇ ಹೊರತು ಅನ್ಯ ಸಮಾಜದ ವಿರುದ್ಧವಲ್ಲ’ ಎಂದು ಶಾಸಕಿ ಕರೆಮ್ಮ ನಾಯಕ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧ ಎದುರು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಕುರುಬ ಸಮುದಾಯವನ್ನು ಸೇರಿಸುವ ಪ್ರಸ್ತಾವ ವಿರೋಧಿಸಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಅವರು ಮಾತನಾಡಿದರು.
‘ಇತರ ಜಾತಿಗಳನ್ನು ಎಸ್‌ಟಿಗೆ ಸೇರಿಸುವ ಹುನ್ನಾರ ಮಾತ್ರ ನಡೆಸುತ್ತಿದೆ. ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿಯನ್ನೇ ಸಂಪೂರ್ಣವಾಗಿ ಪಡೆದಿಲ್ಲ. ರಾಜ್ಯದ ಪ್ರಬಲ ಸಮಾಜವನ್ನು ಸೇರಿಸಿದರೆ ಪರಿಶಿಷ್ಟ ಪಂಗಡದ ಬಡ ಕುಟುಂಬಗಳು ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.
ವಾಲ್ಮೀಕಿ ಸಮಾಜದ ಮುಖಂಡ ವಿನೋದ ಹಿರೇಬೂದೂರು ಮಾತನಾಡಿ, ‘ಬೇರೆ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿದಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಬೇಡರ ದಂಗೆ ಮತ್ತೆ ಮರುಕಳಿಸಲಿದೆ’ ಎಂದರು.
ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಿಂದ ಮಿನಿ ವಿಧಾನಸೌಧ ವರೆಗೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ವಾಲ್ಮೀಕಿ ಸಮಾಜದ ಮುಖಂಡರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗೋಲಪಲ್ಲಿ ವರದಾನಂದ ಸ್ವಾಮೀಜಿ, ತಾಲ್ಲೂಕು ಅಧ್ಯಕ್ಷ ಮಾನಸಯ್ಯ ನಾಯಕ, ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ ಗೋಸಲ್, ಬಸವರಾಜ ನಾಯಕ ಮಸ್ಕಿ, ಶಿವರಾಜ ಮಟ್ಲ್, ಬಸವರಾಜ ಪೂಜಾರಿ, ಕೂಡ್ಲಿಗಯ್ಯ, ಮಸ್ತಾನಿ ನಾಯಕ, ರಾಚಣ್ಣ ನಾಯಕ ಕೋಳೂರ, ವೆಂಕಟೇಶ ಸೋಮಕಾರ, ಪ್ರಭು ನಾಯಕ, ಭೀಮಣ್ಣ ಗೋಸಲ್, ರಾಮಣ್ಣ ನಾಯಕ ಕರಿಗುಡ್ಡ, ರಮೇಶ, ನಾಗರಾಜ ಮತ್ತು ಸಮಾಜದ ಹಿರಿಯ ಮುಖಂಡರು ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.