ADVERTISEMENT

ರಾಯಚೂರು: ಡಿಜಿಟಲ್‌ ಜಾಗೃತಿಗೆ ಕೋಟಿ ವೆಚ್ಚದ ಡಿಟಿವಿ

ಅತ್ಯಾಧುನಿಕ ಬಸ್‌ನಲ್ಲೇ ವಿದ್ಯಾರ್ಥಿಗಳಿಗೆ 21 ದಿನಗಳ ತರಬೇತಿ

ಚಂದ್ರಕಾಂತ ಮಸಾನಿ
Published 6 ಡಿಸೆಂಬರ್ 2025, 5:08 IST
Last Updated 6 ಡಿಸೆಂಬರ್ 2025, 5:08 IST
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಿಲುಗಡೆ ಮಾಡಿರುವ ಡಿಜಿಟಲ್‌ ತಂತ್ರಜ್ಞಾನ ವಾಹನ
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಿಲುಗಡೆ ಮಾಡಿರುವ ಡಿಜಿಟಲ್‌ ತಂತ್ರಜ್ಞಾನ ವಾಹನ   

ರಾಯಚೂರು: ಇಪ್ಪತ್ತೊಂದನೆಯ ಶತಮಾನದಲ್ಲಿ ಪದಾರ್ಪಣೆ ಮಾಡಿದ ನಂತರ ಡಿಜಿಟಲ್‌ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ಆಗಿದೆ. ಡಿಜಿಟಲ್‌ ಜ್ಞಾನವಿರದಿದ್ದರೆ ಪದವಿ ಪಡೆದವರೂ ಒಂದು ಲೆಕ್ಕದಲ್ಲಿ ಅನಕ್ಷರಸ್ಥರೇ. ಈ ಅಂಶವನ್ನು ಗಮನದಲ್ಲಿರಿಸಿಕೊಂಡು ಎನ್‌ಐಐಟಿ ಫೌಂಡೇಷನ್‌ ಡಿಜಿಟಲ್‌ ಸಾಕ್ಷರತೆಗೆ ₹ 1 ಕೋಟಿ ವೆಚ್ಚದ ಡಿಜಿಟಲ್‌ ಟೆಕ್ನಾಲಾಜಿ ವೆಹಿಕಲ್‌ (ಡಿಟಿವಿ) ಅನ್ನು ಉತ್ತರ ಕರ್ನಾಟಕದ ರಾಯಚೂರಲ್ಲಿ ಮೊದಲ ಬಾರಿಗೆ ಪರಿಚಯಿಸಿದೆ.

ಆಧುನಿಕ ತಂತ್ರಜ್ಞಾನದಿಂದ ಕೂಡಿರುವ ಡಿಜಿಟಲ್‌ ತಂತ್ರಜ್ಞಾನದ ಬಸ್ ಸಂಪೂರ್ಣ ಹವಾನಿಯಂತ್ರಿತ ಇದೆ. ಬಸ್ಸಿನ ಮೇಲೆ ಸೋಲಾರ್‌ ಪ್ಯಾನಲ್‌ಗಳನ್ನು ಅಳವಡಿಸಲಾಗಿದೆ. ಬಸ್‌ನಲ್ಲಿ ಒಟ್ಟು 20 ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ. ಇದಕ್ಕೆ ಸೋಲಾರ್‌ನಿಂದ ಉತ್ಪತ್ತಿಯಾಗುವ ವಿದ್ಯುತ್‌ನ್ನು ಬಳಸಲಾಗುತ್ತಿದೆ. ಬಸ್‌ಗನಲ್ಲಿ ನಾಲ್ವರು ಸಿಬ್ಬಂದಿ ಸಹ ಇದ್ದಾರೆ.

ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಎಸ್‌ಸಿ ಸ್ನಾತಕೋತ್ತರ ಪದವಿ ಪಡೆದಿರುವ ಹರಿಶಂಕರ ಎಚ್‌. ಹಾಗೂ ಕಾರ್ಯನಿರ್ವಾಹಕ ಮೊಬಲೈಸರ್ ಚನ್ನಯ್ಯ ಸ್ವಾಮಿ ಅವರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.

ADVERTISEMENT

ಸಂಚಾರಿ ವಾಹನದಲ್ಲೇ ನಿತ್ಯ ಕನಿಷ್ಠ 20 ವಿದ್ಯಾರ್ಥಿಗಳಿಗೆ 21 ದಿನಗಳ ವರೆಗೆ ಕಂಪ್ಯೂಟರ್ ಬಳಕೆಯ ತರಬೇತಿ ಹಾಗೂ ಡಿಜಿಟಲ್‌ ತಂತ್ರಜ್ಞಾನದ ಮಾಹಿತಿ ಕೊಡಲಾಗುತ್ತಿದೆ. 21 ದಿನಗಳ ತರಬೇತಿ ಮುಗಿಸಿದ ನಂತರ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನೂ ವಿತರಿಸಲಾಗುತ್ತಿದೆ.

‘ಮೊದಲ ಹಂತದಲ್ಲಿ ರಾಯಚೂರಿನ 110 ವಿದ್ಯಾರ್ಥಿಗಳಿಗೆ ಡಿಜಿಟಲ್‌ ತರಬೇತಿ ನೀಡಿ ಪ್ರಮಾಣಪತ್ರವನ್ನು ವಿತರಿಸಲಾಗಿದೆ. ಒಟ್ಟು ನಾಲ್ಕು ವಿಷಯಗಳ ಆಯ್ಕೆ ಮಾಡಿಕೊಳ್ಳಲು ಹೇಳುತ್ತೇವೆ. ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡರೆ ಅದಕ್ಕೆ ಅನುಗುಣವಾಗಿ ನಿತ್ಯ ಒಂದು ಗಂಟೆ ತರಬೇತಿ ಕೊಡುತ್ತೇವೆ‘ ಎಂದು ಕಾರ್ಯನಿರ್ವಾಹಕ ಮೊಬಲೈಸರ್ ಚನ್ನಯ್ಯ ಸ್ವಾಮಿ ತಿಳಿಸಿದರು.

‘ಪ್ರಾಯೋಗಿಕವಾಗಿ ವಿದ್ಯಾರ್ಥಿ ವಸತಿಗೃಹಳ ಬಳಿ ವಾಹನ ನಿಲುಗಡೆ ಮಾಡಿ ವಿದ್ಯಾರ್ಥಿಗಳಿಗೆ ತರಬೇತಿ ಕೊಡುತ್ತಿದ್ದೇವೆ. 18ರಿಂದ 59 ವರ್ಷದೊಳಗಿನ ಯಾವುದೇ ವ್ಯಕ್ತಿ ತರಬೇತಿ ಪಡೆಯಲು ಅವಕಾಶವಿದೆ‘ ಎಂದು ಹೇಳಿದರು.

ಎನ್‌ಐಐಟಿ ಫೌಂಡೇಷನ್‌, ಸಿಎಸ್‌ಆರ್‌ ನಿಧಿಯಲ್ಲಿ ಖರೀದಿಸಲಾದ ಡಿಟಿವಿ ಮೂಲಕ ಡಿಜಿಟಲ್‌ ಸಾಕ್ಷರತೆ ಮೂಡಿಸಲು ಪ್ರಯತ್ನಿಸುತ್ತಿದೆ. ರಾಜಸ್ಥಾನ, ಉತ್ತರಪ್ರದೇಶ, ಛತ್ತಿಸಘಡ ಸೇರಿ ದೇಶದ 17 ಕಡೆ ಇಂತಹ ವಾಹನಗಳು ಜನರಲ್ಲಿ ಡಿಜಿಟಲ್‌ ಜಾಗೃತಿ ಮೂಡಿಸಲು ಸಂಚರಿಸುತ್ತಿವೆ. ಕರ್ನಾಟಕದಲ್ಲಿ ಎರಡು ಇಂತಹ ವಾಹನಗಳು ಇವೆ. ರಾಯಚೂರಿಗೆ ಬಂದಿರುವ ಡಿಟಿವಿ ಹೆಚ್ಚು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ.

ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣ ಡಿಜಿಟಲ್‌ ಜಾಗೃತಿಗೆ ರಾಯಚೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಬಸ್‌ನಲ್ಲಿ ದೊಡ್ಡ ಪರದೆಯ ಡಿಜಿಟಲ್‌ ಟಿವಿ ಇರುವುದರಿಂದ ಸೈಬರ್‌ ಅಪರಾಧ, ಫೋಸ್ಕೊ ಕಾಯ್ದೆ ಹೀಗೆ 17 ವಿಷಯಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಿಲುಗಡೆ ಮಾಡಿರುವ ಡಿಜಿಟಲ್‌ ತಂತ್ರಜ್ಞಾನ ವಾಹನದಲ್ಲಿ ಮಾಹಿತಿ ಪಡೆದ ಪೊಲೀಸ್‌ ಅಧಿಕಾರಿಗಳು

ವಿದ್ಯಾರ್ಥಿ ವಸತಿನಿಲಯ ಆಯ್ಕೆ ಮಾಡಿಕೊಂಡು ತರಬೇತಿ ಉತ್ಸುಕತೆಯಿಂದ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿನಿಯರು  ಶಾಲಾ ಅವಧಿಯಲ್ಲಿ ಕಂಪ್ಯೂಟರ್‌ ಬೋಧನೆಗೆ ತೊಡಕು

ವಾಹನ ನಿಲುಗಡೆಗೆ ಸಾಕಷ್ಟು ಜಾಗವಿದ್ದರೆ ಸಾರ್ವಜನಿಕರ ಮನವಿ ಮೇರೆಗೆ ಆಸಕ್ತರಿರುವ ಸ್ಥಳಕ್ಕೆ ಬಂದು ತರಬೇತಿ ಕೊಡಲಾಗುವುದು.
ಚನ್ನಯ್ಯ ಸ್ವಾಮಿ ಕಾರ್ಯನಿರ್ವಾಹಕ ಮೊಬಲೈಸರ್
ಆಧುನಿಕ ತಂತ್ರಜ್ಞಾನ ಹೊಂದಿರುವ ಹವಾನಿಯಂತ್ರಿತ ಎನ್‌ಐಐಟಿಯ ಡಿಜಿಟಲ್‌ ವಾಹನವನ್ನು ಸೈಬರ್‌ ಅಪರಾಧ ತಡೆ ಜಾಗೃತಿಗೆ ಬಳಸಿಕೊಳ್ಳಲಾಗುವುದು
ಪುಟ್ಟಮಾದಯ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.