ADVERTISEMENT

ಕೊರೊನಾ ರೋಗಿಗಳ ಚಿಕಿತ್ಸೆಗೆ ತಯಾರಿ

ಐದು ಹಂತಗಳಲ್ಲಿ ಆಸ್ಪತ್ರೆಗಳನ್ನು ಸಜ್ಜು ಮಾಡಲಾಗಿದೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 14:44 IST
Last Updated 9 ಏಪ್ರಿಲ್ 2020, 14:44 IST

ರಾಯಚೂರು: ಕೊರೊನಾ ಶಂಕಿತರ ಸಂಖ್ಯೆ ಅಧಿಕವಾದರೆ ಹಾಗೂ ಕೊರೊನಾ ರೋಗಿಗಳು ಪತ್ತೆಯಾದರೆ ಚಿಕಿತ್ಸೆ ನೀಡುವುದಕ್ಕೆ ಅಗತ್ಯವಾಗುವ ಸಕಲ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿದೆ. ಇದುವರೆಗಿನ ಎಲ್ಲ ವರದಿಗಳು ನೆಗೆಟಿವ್‌ ಇರುವುದು ಜನರಲ್ಲಿ ನೆಮ್ಮದಿ ಮೂಡಿಸಿದೆ.

ಇನ್ನೂ 17 ವರದಿಗಳು ಬರಬೇಕಿದೆ. ರಾಯಚೂರು ಜಿಲ್ಲೆಯ ನೆರೆಯ ಯಾದಗಿರಿ, ಕಲಬುರ್ಗಿ, ಬಳ್ಳಾರಿ ಜಿಲ್ಲೆಗಳಲ್ಲಿ ಕೊರೊನಾ ಪಾಜಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ತೆಲಂಗಾಣದ ಗದ್ವಾಲ್‌ ಹಾಗೂ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಗಳಲ್ಲಿ ಬಹಳಷ್ಟು ಕೊರೊನಾ ಪಾಜಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಅಲ್ಲಿಂದ ಕೊರೊನಾ ಸೋಂಕು ರಾಯಚೂರಿನತ್ತ ಬಾರದಂತೆ ಅಧಿಕಾರಿಗಳು ನಿಗಾ ಇಡುವ ಸವಾಲು ಇದೆ.

ಈಗಾಗಲೇ ಅಂತರರಾಜ್ಯ ಚೆಕ್‌ಪೋಸ್ಟ್‌ ಮೂಲಕ ಹೊರಹೋಗುವುದು ಹಾಗೂ ಒಳ ಬರುವುದನ್ನು ಸಂಪೂರ್ಣ ಸ್ಥಗಿತ ಮಾಡಲಾಗಿದೆ. ಆದರೂ ಗ್ರಾಮೀಣ ಮಾರ್ಗಗಳ ಮೂಲಕ ಕೆಲವರು ನುಸುಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ADVERTISEMENT

ಪ್ರಮುಖ ಲಾಡ್ಜ್‌ಗಳು ತಾತ್ಕಾಲಿಕ ವಶಕ್ಕೆ: ಕೊರೊನಾ ವೈರಸ್‌ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಮುಖ ವಸತಿ ಸೌಕರ್ಯವುಳ್ಳ ಹೊಟೇಲ್‌ಗಳನ್ನು ತಾತ್ಕಾಲಿಕವಾಗಿ ಸುಪರ್ದಿಗೆ ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಾಡ್ಜ್‌, ಹೊಟೇಲ್ ಮಾಲೀಕರ ಸಭೆ ನಡೆಸಿದರು. ಗುರುತಿಸಲಾದ ಪ್ರಮುಖ ಹೊಟೇಲ್‌ಗಳನ್ನು ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ತಾತ್ಕಾಲಿಕವಾಗಿ ಕೂಡಲೇ ಹಸ್ತಾಂತರಿಸುವಂತೆ ತಿಳಿಸಿದರು.
ತಾತ್ಕಾಲಿಕವಾಗಿ ಹೊಟೇಲ್ ಹಾಗೂ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳೊಂದಿಗೆ ಹಸ್ತಾಂತರಿಸಬೇಕು, ಕೋವಿಡ್-19 ಚಿಕಿತ್ಸೆ ನೀಡಲೆಂದು ಗುರುತಿಸಲಾದ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿಗೆ ಹೊಟೇಲ್ ರೂಮುಗಳು ಅಗತ್ಯವಿದೆ. ಈ ದಿಸೆಯಲ್ಲಿ ಹೊಟೇಲ್ ಮಾಲೀಕರ ಸಹಕಾರ ಅಗತ್ಯ, ಎಲ್ಲರೂ ಸ್ಪಂದಿಸಬೇಕು ಎಂದು ಹೇಳಿದರು.

ಹತ್ತಿರದ ಮಾರುಕಟ್ಟೆಗೆ ಹೋಗಿ: ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರಿಗಾಗಿ ರಾಯಚೂರು ನಗರದ ಆಯಾ ಬಡಾವಣೆಗಳಲ್ಲಿ ತರಕಾರಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ.

ಜಿಲ್ಲಾ ಪೊಲೀಸ್ ಇಲಾಖೆ, ನಗರಸಭೆ ಹಾಗೂ ಜಿಲ್ಲಾಡಳಿತ ವತಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ ತರಕಾರಿ ಮಾರುಕಟ್ಟೆ ಮಾಡಲಾಗಿದೆ. ಅಲ್ಲದೇ ತರಕಾರಿ, ಕಿರಾಣಿ, ಹಾಲು, ಹಣ್ಣು ಹಂಪಲು, ಮಾರಾಟಕ್ಕೆ ಸ್ಥಳಗಳನ್ನು ಗುರುತಿಸಲಾಗಿದೆ.

ಆಯಾ ಬಡಾವಣೆಯ ನಾಗರಿಕರು ತಮಗೆ ಹತ್ತಿರವಿರುವ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟ ಮಾಡಬೇಕು. ಅನವಶ್ಯಕವಾಗಿ ರಸ್ತೆ ಮೇಲೆ ತಿರುಗಾಡುವುದು ಮತ್ತು ವಾಹನಗಳನ್ನು ಚಲಾಯಿಸುವುದು ಹಾಗೂ ಒಂದು ವಾರ್ಡಿನ ಜನರು ಇನ್ನೋಂದು ವಾರ್ಡ್‌ಗೆ ಹೋಗುವದು, ನಗರದ ಬೇರೆ ವಾರ್ಡಿನ ಜನರು ಮಹಾತ್ಮ ಗಾಂಧಿ ಕ್ರೀಡಾಂಗಣದ ಮುಂಭಾಗದಲ್ಲಿ ಸೇರುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.