ADVERTISEMENT

ಮೀಸಲಾತಿ ರದ್ದುಗೊಳಿಸಲು ಸರ್ಕಾರ ಹುನ್ನಾರ: ಆರೋಪ

ಜಿಲ್ಲಾ ಕಾಂಗ್ರೆಸ್‌ನಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 13:35 IST
Last Updated 17 ಫೆಬ್ರುವರಿ 2020, 13:35 IST
ರಾಯಚೂರು ಜಿಲ್ಲಾ ಕಾಂಗ್ರೆಸ್‌ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು
ರಾಯಚೂರು ಜಿಲ್ಲಾ ಕಾಂಗ್ರೆಸ್‌ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು   

ರಾಯಚೂರು: ಕೇಂದ್ರ ಸರ್ಕಾರ ಹಾಗೂ ಉತ್ತರಖಂಡ್ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ರದ್ದುಗೊಳಿಸಲು ಸಂಚು ರೂಪಿಸುತ್ತಿವೆ ಎಂದು ಆರೋಪಿಸಿ‌ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ರಾಯಚೂರಿನಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ನೆರೆದಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಿಜೆಪಿ‌ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಹಾಗೂ ಉತ್ತರಾಖಂಡ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ರಕ್ತಗತ ಗುಣವೇ ದಲಿತ ವಿರೋಧಿ, ಆದಿವಾಸಿ ಹಿಂದುಳಿದ ವರ್ಗ ವಿರೋಧಿಯಾಗಿದೆ. ಈ‌ ಕುತಂತ್ರಕ್ಕೆ ಸಾಕ್ಷಿಯಾಗಿ ಉತ್ತರಾಖಂಡ ವರ್ಸಸ್ ಅವಿದೇಶ್ ಕುಮಾರ ಪಾಂಡೆ ಹಾಗೂ ಮುಖೇಶ್ ಕುಮಾರ್ ಮತ್ತು ಉತ್ತರಾಖಂಡ ಸರ್ಕಾರದ ದಾವೆಗಳಲ್ಲಿ ಉತ್ತರಾಖಂಡ ಸರ್ಕಾರದ ಪರ ವಕೀಲರು ದಲಿತ, ಹಿಂದುಳಿದ ವರ್ಗಗಳ ವಿರೋಧಿ ನೀತಿ ಅನುಸರಿಸಿ ವಾದ ಮಂಡಿಸಿದ್ದಾರೆ. ಈ ವರ್ಗಗಳಿಗೆ ಮೀಸಲಾತಿ‌ ಮೂಲಭೂತ ಹಕ್ಕಲ್ಲ‌ ಎಂದು‌ ವಾದ ಮಂಡಿಸಿರುವುದನ್ನು ಖಂಡಿಸಿದರು.

ADVERTISEMENT

ಸರ್ಕಾರಿ ಉದ್ಯೋಗ ಹಾಗೂ ಬಡ್ತಿ ಕೊಡುವುದರಲ್ಲಿ ಮೀಸಲಾತಿ ಪರಿಗಣಿಸಬೇಕೆಂಬ ಸಂವಿಧಾನಿಕ ಹಕ್ಕಲ್ಲ ಹಾಗೂ ರಾಜ್ಯ ಸರ್ಕಾರ ಮೀಸಲಾತಿ ನೀಡುವುದು ಕರ್ತವ್ಯವಲ್ಲ ಎಂದು ಸರ್ಕಾರದ ಪರವಾಗಿ ವಕೀಲರು‌ ವಾದ ಮಂಡಿಸಿದ್ದಾರೆ‌. ಈ ವಾದವನ್ನು ಶ್ರೇಷ್ಟ ನ್ಯಾಯಾಲಯ ಒಪ್ಪಿಕೊಂಡಿದ್ದು, ಈ ಸಮುದಾಯಗಳಿಗೆ ಅನ್ಯಾಯವಾಗಿದೆ. ಸರ್ಕಾರಿ‌ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ಇಲ್ಲವೆಂಬ ಅಭಿಪ್ರಾಯ ಸರ್ಕಾರ ಹೊಂದಿದ್ದರೆ, ಸಂವಿಧಾನದ ಅನುಚ್ಛೇದ 16(4) ಮತ್ತು 16 (4ಎ ) ಪ್ರಕಾರ ಎಸ್ಸಿ,ಎಸ್ಟಿ ಸರ್ಕಾರಿ ಉದ್ಯೋಗ ಮತ್ತು ಬಡ್ತಿ ವಿಚಾರದಲ್ಲಿ ಮೀಸಲಾತಿ ನೀಡಬಹುದು. ಅದನ್ನು ನೀಡುವುದು ಬೇಕೊ ಬೇಡವೋ ಎಂಬ ಬಗ್ಗೆ ರಾಜ್ಯ ಸರ್ಕಾರ ನಿರ್ಧರಿಸಬಹುದು ಎಂದು ತೀರ್ಪು‌ ನೀಡಿದ್ದರಿಂದ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳಿಗೆ ಸರ್ಕಾರದಿಂದ ಉದ್ಯೋಗ ಮೀಸಲಾತಿ ಮೂಲಭೂತ ಹಕ್ಕಿನಿಂದ ವಂಚಿತರಾಗಬೇಕಾಗಿದೆ. ಈ ಹಿಂದೆ ಆರ‌್ಎಸ್ಎಸ್ ಸಹ ಸಂಚಾಲಕ ಮೊಹನ್ ಭಗಾವತ್, ಮನ್ ಮೋಹನ್ ವೈದ್ಯ ಮೀಸಲಾತಿ ಬಗ್ಗೆ ವಿಮರ್ಶೆ ನಡೆಯಬೇಕು ಎಂದು ವಾದ ಮಂಡಿಸಿರುವುದು ಈಗಿನ ಬೆಳವಣಿಗೆಗೆ ಪೂರಕವಾಗಿಯೆ ಇತ್ತು.

ಬಿಜೆಪಿ ಸರ್ಕಾರ ಉದ್ದೇಶ ಪೂರ್ವಕವಾಗಿ ಮೀಸಲಾತಿ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದ್ದು, ಜನರನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ‌ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ, ಮುಖಂಡರಾದ ವಸಂತ ಕುಮಾರ, ಬಸವರಾಜ ರೆಡ್ಡಿ, ನಗರಸಭೆ ಸದಸ್ಯ ಜಯಣ್ಣ, ರುದ್ರಪ್ಪ ಅಂಗಡಿ, ಜಿ. ಶಿವಮೂರ್ತಿ, ಶಾಂತಪ್ಪ, ಸಾಜಿದ್ ಸಮೀರ್, ಅಸ್ಲಂ ಪಾಶಾ, ಶಶಿಕಲಾ, ನಿರ್ಮಲಾ ಬೆಣ್ಣೆ, ಅಬ್ದುಲ್ ಕರೀಂ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.