ADVERTISEMENT

ಶಾಸಕರ ಸಹಕಾರದೊಂದಿಗೆ ಅಭಿವೃದ್ಧಿ

ನೂತನ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ.ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 13:35 IST
Last Updated 26 ಜನವರಿ 2022, 13:35 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕೋವಿಡ್‌ ಮೂರನೇ ಅಲೆ ನಿರ್ವಹಣೆ ಪರಿಶೀಲನಾ ಸಭೆಯಲ್ಲಿ ನೂತನ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ.ಪಾಟೀಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕೋವಿಡ್‌ ಮೂರನೇ ಅಲೆ ನಿರ್ವಹಣೆ ಪರಿಶೀಲನಾ ಸಭೆಯಲ್ಲಿ ನೂತನ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ.ಪಾಟೀಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು   

ರಾಯಚೂರು: ’ಜಿಲ್ಲೆಯ ಅಭಿವೃದ್ಧಿ ಹಾಗೂ ಜನಪರ ಕೆಲಸ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಎಲ್ಲ ಶಾಸಕರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು‘ ಎಂದು ನೂತನ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ.‍ಪಾಟೀಲ ಮುನೇನಕೊಪ್ಪ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕೋವಿಡ್‌ ಮೂರನೇ ಅಲೆ ನಿರ್ವಹಣೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್ ಸೋಂಕು ಹರಡುವುದನ್ನು ತಡೆಯುವುದಕ್ಕೆ ಸಂಬಂಧಿಸಿದಂತೆ, ಚಿಕಿತ್ಸೆ ನೀಡುವುದಕ್ಕೆ ಔಷಧಿಗಳ ಕೊರತೆ ಆಗಬಾರದು. ಸರ್ಕಾರದ ನಿಯಮಗಳನ್ನು ಪಾಲನೆ‌ ಮಾಡಬೇಕು. ಎರಡನೇ ಡೋಸ್ ಕೊಡುವುದನ್ನು ವೇಗಗೊಳಿಸಬೇಕು. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಆಕ್ಸಿಜನ್ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.

ADVERTISEMENT

ಕೋವಿಡ್ ನಿಯಂತ್ರಣದಲ್ಲಿ ಅಧಿಕಾರಿಗಳು ಉತ್ತಮವಾಗಿ ಕಾರ್ಯ ಮಾಡುತ್ತಿದ್ದಾರೆ. ಲಸಿಕೆಗೆ ಸಂಬಂಧಿಸಿದಂತೆ ನೋಂದಣಿ ಸಮರ್ಪಕವಾಗಿ ಆಗುತ್ತಿಲ್ಲ ಎಂಬುದನ್ನು ಸಂಸದರು ಹೇಳಿದ್ದಾರೆ. ಏಪ್ರಿಲ್ ಮೊದಲ ವಾರ ಕೆಡಿಪಿ ಸಭೆ ಮಾಡಲಾಗುವುದು. ಜನ ಪರ ಕೆಲಸ ಮಾಡುವುದಕ್ಕೆ ಎಲ್ಲರೂ ತಂಡವಾಗಿ ಇರೋಣ ಎಂದು ಕೋರಿದರು.

ಶಾಸಕ ಬಸನಗೌಡ ದದ್ದಲ ಮಾತನಾಡಿ, ಆರೋಗ್ಯ ಉಪ ಕೇಂದ್ರಗಳಲ್ಲಿ ಕೋವಿಡ್ ಟೆಸ್ಟ್ ಅಳವಡಿಸಬೇಕು. ಕೋವಿಡ್‌ನಿಂದ ಮೃತಪಟ್ಟವರಿಗೆ ಸಮರ್ಪಕವಾಗಿ ಪರಿಹಾರ ತಲುಪುತ್ತಿಲ್ಲ. ವೈದ್ಯರ ಕೊರತೆ ಸಮಸ್ಯೆ ನೀಗಿಸಬೇಕು ಎಂದು ತಿಳಿಸಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲ ಎಂದು ಕೆಲವರು ವದಂತಿ ಹಬ್ಬಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೂಡಲೇ ಆರೋಗ್ಯಾಧಿಕಾರಿ ಮಾಧ್ಯಮಗಳಿಗೆ ಸರಿಯಾದ ಮಾಹಿತಿ ಒದಗಿಸಬೇಕು. ಔಷಧಿಗಳ ಕೊರತೆ ಆಗದಂತೆ ನಿಗಾ ವಹಿಸಬೇಕು ಎಂದು ಸೂಚಿಸಿದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಶೀತ, ನೆಗಡಿ ಬರುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆಯವರು ನಿಗಾ ವಹಿಸಬೇಕು. ಅಂಬ್ಯುಲನ್ಸ್ ಗಳಿಗೆ ಚಾಲಕರನ್ನು ನೇಮಕಗೊಳಿಸಿ, ಸಕ್ರಿಯಗೊಳಿಸಬೇಕು. ಔಷಧಿ ಕಿಟ್‌ಗಳನ್ನು ಮನೆಗಳಿಗೆ ತಲುಪಿಸಬೇಕು ಎಂದು ತಿಳಿಸಿದರು.

ರಿಮ್ಸ್‌ ನಿರ್ದೇಶಕ ಡಾ ಬಸವರಾಜ ಪೀರಾಪುರ ಮಾತನಾಡಿ, ಓಪೆಕ್ ನಲ್ಲಿ ಈಗಾಗಲೇ 12 ವೈದ್ಯರನ್ನು ನೇಮಿಸಲಾಗಿದ್ದು, ಮತ್ತೆ 12 ವೈದ್ಯರನ್ನು ನೇಮಿಸಲಾಗುವುದು. ಓಪೆಕ್ ನಲ್ಲಿ ಈಗ ಕ್ಯಾಜ್ಯುಯಾಲಿಟಿ ವಿಭಾಗ ಆರಂಭಿಸಲಾಗಿದೆ ಎಂದರು.

ಶಾಸಕ ರಾಜಾ ವೆಂಕಟಪ್ಪ‌ ನಾಯಕ ಮಾತನಾಡಿ, ಮಾನ್ವಿಯಲ್ಲಿ ಸ್ಥಾಪಿಸಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆಯೆ ಎಂಬುದನ್ನು ಜಿಲ್ಲಾ ಆರೋಗ್ಯಾಧಿಕಾರಿ ಭೇಟಿನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಅವರು ಜಿಲ್ಲೆಯ ಕೋವಿಡ್‌ ಸ್ಥಿತಿಗತಿ ಅಂಕಿಅಂಶಗಳ ವರದಿ ನೀಡಿದರು.

ಶಾಸಕ ಶಿವನಗೌಡ ನಾಯಕ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ., ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್‌.ದುರುಗೇಶ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಹಾರಾ ಖಾನಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.