ADVERTISEMENT

17 ರಂದು ಕಾಂಗ್ರೆಸ್‌ ವಿಭಾಗಮಟ್ಟದ ಸಮಾವೇಶ

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪತ್ರಿಕಾಗೋಷ್ಟಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 13:51 IST
Last Updated 14 ಆಗಸ್ಟ್ 2021, 13:51 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ರಾಯಚೂರು: ಬೇರುಮಟ್ಟದಿಂದ ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸುವುದು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸುವ ಕಾರ್ಯ ಆರಂಭವಾಗಿದ್ದು, ಆಗಸ್ಟ್‌ 17 ರಂದು ರಾಯಚೂರಿನಲ್ಲಿ ವಿಭಾಗಮಟ್ಟದ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಹಿರಿಯರು ಪಾಲ್ಗೊಳ್ಳುವರು ಎಂದರು.

ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಿಂದ ಕಾಂಗ್ರೆಸ್‌ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಅಧ್ಯಕ್ಷರು, ಮುಂಚೂಣಿ ಘಟಕದ ಪದಾಧಿಕಾರಿಗಳೆಲ್ಲರೂ ಭಾಗವಹಿಸುವರು. ಕಾಂಗ್ರೆಸ್ ರಾಜಕೀಯ ಪಕ್ಷ ಮಾತ್ರವಲ್ಲದೆ ಇದೊಂದು ಆಂದೋಲನವಾಗಿದೆ. ಸ್ವಾತಂತ್ರ್ಯಾಕ್ಕಾಗಿ ಹೋರಾಡಿದ ಪಕ್ಷವಾಗಿದ್ದು, ಒಂದು ವರ್ಷದುದ್ದಕ್ಕೂ ಅಮೃತ ಮಹೋತ್ಸವ ಆಚರಣೆ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ಪಕ್ಷದಲ್ಲಿನ ಹಿಂದೆ ಇದ್ದ ಪದಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಹೊಸ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಶೀಘ್ರದಲ್ಲೆ ನಡೆಯುತ್ತಿದೆ. ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ. ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಚುನಾವಣೆ ಎಸುರಿಸುತ್ತೇವೆ. ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಒಂದು ವೇಳೆ, ಅಸಮಾಧಾನ ಇದ್ದರೂ ಮಾತನಾಡಿ ಬಗೆಹರಿಸುತ್ತೇವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ರೈತ ವಿರೋಧಿ ಕಾಯಿದೆ ಜಾರಿ ಮಾಡಿ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಕೊರೊನಾದಿಂದ ಲಕ್ಷಾಂತರ ಜನ ಸತ್ತರೂ ಕೇಂದ್ರ ಸರ್ಕಾರ ಸುಳ್ಳು ಮಾಹಿತಿ ನೀಡುತ್ತಿದೆ. ರಾಜ್ಯದಲ್ಲಿ ಕನಿಷ್ಠ 3 ಲಕ್ಷ ಜನ ಕೊರೊನಾದಿಂದ ಮೃತರಾದರು. ಅದರಲ್ಲೂ ಹಾಸಿಗೆ, ಆಂಬುಲೆನ್ಸ್, ಆಮ್ಲಜನಕ ಇಲ್ಲದೆ ಸತ್ತವರ ಸಂಖ್ಯೆಯೆ ಹೆಚ್ಚಾಗಿದೆ ಎಂದರು.

‘ಸಿ.ಟಿ.ರವಿಗೆ ಯಾವ ಚರಿತ್ರೆ ,ಇತಿಹಾಸ ಗೊತ್ತಿದೆ. ನೆಹರು, ಇಂದಿರಾಗಾಂಧಿ ಅವರು ದೇಶಕ್ಕೆ ಸಲ್ಲಿಸಿದ ಸೇವೆಯಷ್ಟೂ ರವಿಗೆ ವಯಸ್ಸಾಗಿಲ್ಲ. ಜನರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ. ಸ್ವತಃ ವಾಜಪೇಯಿ ಅವರು ಇತಿಮಿತಿಯಲ್ಲಿ ಹುಕ್ಕಾ ಬಾರ್ ತಗೊತಿದ್ದೆ ಅಂತ ಹೇಳಿಕೊಂಡಿದ್ದರು’ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ, ಎಐಸಿಸಿ ಕಾರ್ಯದರ್ಶಿ ಎನ್‌.ಎಸ್‌.ಬೋಸರಾಜ, ಶಾಸಕ ಬಸನಗೌಡ ದದ್ದಲ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ ಇಟಗಿ, ಕೆಪಿಸಿಸಿ ವಕ್ತಾರ್‌ ಎ.ವಸಂತಕುಮಾರ್‌, ನಗರಸಭೆ ಅಧ್ಯಕ್ಷ ಈ.ವಿನಯಕುಮಾರ್‌, ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಿ.ಬಸವರಾಜ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.