ADVERTISEMENT

ರಾಯಚೂರು | ಹೂವು–ಹಣ್ಣು, ಪಟಾಕಿ ಖರೀದಿ ಭರಾಟೆ

ಜಿಲ್ಲೆಯ ವಿವಿಧ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 5:33 IST
Last Updated 21 ಅಕ್ಟೋಬರ್ 2025, 5:33 IST
ರಾಯಚೂರು ನಗರದಲ್ಲಿ ಮಾರಾಟಕ್ಕಿಟ್ಟಿರುವ ಮಣ್ಣಿನ ಹಣತೆಗಳು
ರಾಯಚೂರು ನಗರದಲ್ಲಿ ಮಾರಾಟಕ್ಕಿಟ್ಟಿರುವ ಮಣ್ಣಿನ ಹಣತೆಗಳು   

ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಸಾರ್ವಜನಿಕರು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮುಂದಾಗಿದ್ದಾರೆ.

ಸೋಮವಾರ ನರಕ ಚತುರ್ದಶಿ ನಿಮಿತ್ತ ಮಾರುಕಟ್ಟೆ ಪ್ರದೇಶಗಳಲ್ಲಿ ಪಟಾಕಿಗಳು, ಹೂವು, ಹಣ್ಣು-ಹಂಪಲು, ಪ್ರಣತಿ, ಪೂಜಾ ಸಾಮಾಗ್ರಿ ಹಾಗೂ ಇತರ ಅಲಂಕಾರಿಕ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು.

ಚೆಂಡು ಹೂವು, ಬಾಳೆ ಎಲೆ, ಕುಂಬಳಕಾಯಿ, ಮಣ್ಣಿನ ಹಣತೆಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿತು.

ADVERTISEMENT

ನಗರದ ಬಸವೇಶ್ವರ ವೃತ್ತದ ಪಕ್ಕದಲ್ಲಿರುವ ವಾಲ್ಕಾಟ್‌ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಪಟಾಕಿ ಮಾರಾಟ ಮಳಿಗೆಗಳ ಮುಂದೆ ವಿವಿಧ ಬಗೆಯ ಪಟಾಕಿಗಳ ಖರೀದಿಗೆ ಸಾರ್ವಜನಿಕರು ಮುಗಿಬಿದ್ದಿರುವ ದೃಶ್ಯ ಸಾಮಾನ್ಯವಾಗಿತ್ತು.

ಮುನ್ನೆಚ್ಚರಿಕೆ ವಹಿಸಿ: ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಜಿಲ್ಲಾಡಳಿತ ಸೂಚಿಸಿದೆ.

‘ಪಟಾಕಿಗೆ ಬೆಂಕಿ ಹಚ್ಚಿದ ಬಳಿಕ ಅದನ್ನು ಕೈಯಲ್ಲಿ ಮುಟ್ಟಬಾರದು ಅಥವಾ ಕೈಯಲ್ಲಿ ಹಿಡಿದು ಬೇರೆ ಕಡೆ ಕೊಂಡೊಯ್ಯಬಾರದು. ಸಡಿಲವಾದ ಅಥವಾ ನೈಲಾನ್ ಬಟ್ಟೆಗಳನ್ನು ಧರಿಸಬಾರದು. ಮೇಣದಬತ್ತಿ ಅಥವಾ ಲೈಟರ್ಸ್‌ಗಳನ್ನು ಬಳಸಿ ಪಟಾಕಿ ಸುಡಬಾರದು’ ಎಂದು ಡಿಎಚ್‌ಒ ಡಾ.ಸುರೇಂದ್ರ ಬಾಬು ಸಲಹೆ ನೀಡಿದ್ದಾರೆ.

‘ಕಣ್ಣುಗಳನ್ನು ಹೊಗೆ ಮತ್ತು ಬೆಂಕಿಯಿಂದ ರಕ್ಷಿಸಲು ಪಟಾಕಿ ಸಿಡಿಸುವಾಗ ಕನ್ನಡಕವನ್ನು ಧರಿಸಬೇಕು. ನೀರಿನ ಬಕೆಟ್ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆ ಪಕ್ಕದಲ್ಲಿ ಇಟ್ಟುಕೊಳ್ಳಬೇಕು. ಪಟಾಕಿ ಸಿಡಿಸುವಾಗ ಪಾದರಕ್ಷೆಗಳನ್ನು ಕಡ್ಡಾಯವಾಗಿ ಧರಿಸಬೇಕು’ ಎಂದರು. 

‘ಹೆಚ್ಚಿನ ಪ್ರಮಾಣದಲ್ಲಿ ಶಬ್ದ ಉಂಟು ಮಾಡುವ ಹಾಗೂ ವಾಯು ಮಾಲಿನ್ಯ ಆಗದಂಥ ಪರಿಸರಿ ಸ್ನೇಹಿ, ಹಸಿರು ದೀಪಾವಳಿಯನ್ನು ಜನರು ಆಚರಿಸಬೇಕು. ಮಕ್ಕಳು–ಮಹಿಳೆಯರು ಪಟಾಕಿ ಸಿಡಿಸುವಾಗ ಅಗತ್ಯ ಜಾಗ್ರತೆ ವಹಿಸಬೇಕು. ಎಲ್ಲರೂ ಸಂಭ್ರಮ-ಸಡಗರದಿಂದ ಹಬ್ಬ ಆಚರಿಸುವುದರ ಮುಖಾಂತರ ಬೆಳಕಿನ ಹಬ್ಬದ ಮಹತ್ವ ಸಾರಬೇಕು’ ಎಂದು ಜಿಲ್ಲಾಡಳಿತ ಕೋರಿದೆ.

ರಾಯಚೂರು ನಗರದಲ್ಲಿ ಸೋಮವಾರ ದೀಪಾವಳಿ ಪ್ರಯುಕ್ತ ಪಟಾಕಿಗಳನ್ನು ಖರೀದಿಸುತ್ತಿರುವ ಸಾರ್ವಜನಿಕರು
ಮಾನ್ವಿ ಪಟ್ಟಣದಲ್ಲಿ ಹೂವು ಬಾಳೆ ಎಲೆ ಖರೀದಿಸುತ್ತಿರುವ ಜನರು

ಗರಿಗೆದರಿದ ಹೂವಿನ ವ್ಯಾಪಾರ ದೀಪಾವಳಿ ಆಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಬಸವ ವೃತ್ತ ಬಸ್ ನಿಲ್ದಾಣ ಬಳಿಯ ಮಾರುಕಟ್ಟೆ ಪ್ರದೇಶ ಪಂಪಾ ವಾಣಿಜ್ಯ ಸಂಕೀರ್ಣದ ಹತ್ತಿರ ಗ್ರಾಹಕರಿಂದ ಹೂವು ಹಣ್ಣುಗಳ ಖರೀದಿ ಸೋಮವಾರ ಜೋರಾಗಿತ್ತು. ಸಾರ್ವಜನಿಕರಿಂದ ಚೆಂಡು ಹೂವು ಬಾಳೆ ಎಲೆ ಕುಂಬಳಕಾಯಿಗಳ ಖರೀದಿ ಕಂಡು ಬಂದಿತು. ಈ ಬಾರಿ ಚಿತ್ರದುರ್ಗ ಬಳ್ಳಾರಿ ಮೂಲದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೂವಿನ ವ್ಯಾಪಾರಕ್ಕೆ ಆಗಮಿಸಿರುವುದು ವಿಶೇಷ. ಕೆಲವು ಸ್ಥಳೀಯ ವ್ಯಾಪಾರಿಗಳು ಕಂಪ್ಲಿ ಗಂಗಾವತಿ ಭಾಗದಿಂದ ಹೂವು ಹಣ್ಣುಗಳನ್ನು ಖರೀದಿಸಿ ಇಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಟಿಎಪಿಸಿಎಂಎಸ್ ಮೈದಾನದಲ್ಲಿ ಪಟಾಕಿಗಳ ಮಾರಾಟ ಮಳಿಗೆಗಳನ್ನು ತೆರೆಯಲು ಪುರಸಭೆಯ ಆಡಳಿತ ಕ್ರಮ ಕೈಗೊಂಡಿದೆ. ಪಟಾಕಿಗಳ ಮಾರಾಟಗಾರರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಪುರಸಭೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.