ADVERTISEMENT

ನೀರಾವರಿ ಯೋಜನೆಗಳ ಜಾರಿಗೆ ‌ಕೇಂದ್ರದ ಮೇಲೆ BJP ಮುಖಂಡರು ಒತ್ತಡ ಹಾಕಲಿ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 17:03 IST
Last Updated 22 ಅಕ್ಟೋಬರ್ 2025, 17:03 IST
<div class="paragraphs"><p>ಡಿ.ಕೆ ಶಿವಕುಮಾರ್</p></div>

ಡಿ.ಕೆ ಶಿವಕುಮಾರ್

   

ರಾಯಚೂರು: ‘ಬಿಜೆಪಿ ನಾಯಕರಿಗೆ ಕರ್ನಾಟಕದ ಬಗ್ಗೆ ಕಾಳಜಿ ಹಾಗೂ ಬದ್ಧತೆ ಇದ್ದರೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒಟ್ಟಿಗೆ ಒತ್ತಡ ಹಾಕಲು ಬರಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸವಾಲೆಸೆದರು.

ರಾಯಚೂರು ತಾಲ್ಲೂಕಿನ ಪಂಚಮುಖಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

‘ಬಿಜೆಪಿ ನಾಯಕರೇ, ನೀವು ನಿಗದಿ ಮಾಡುವ ಸಮಯಕ್ಕೆ ನಾನು ಬರುತ್ತೇನೆ. ನಾನು ಈಗಾಗಲೇ ಸುಮಾರು 10 ಬಾರಿ ಕೇಂದ್ರ ಸಚಿವರು ಹಾಗೂ ಪ್ರಧಾನಿಮಂತ್ರಿ ಎದುರು ಗೋಗರೆದಿದ್ದೇನೆ. ಆದರೂ ಅವರು ಸಹಾಯ ಮಾಡಿಲ್ಲ. ಕೇಂದ್ರ ಬಜೆಟ್ ನಲ್ಲಿ ಘೋಷಿಸಿದ ₹5300 ಕೋಟಿ ಇದುವರೆಗೂ ಕೊಟ್ಟಿಲ್’ ಎಂದು ಕಿಡಿಕಾರಿದರು.

‘ತುಂಗಭದ್ರಾ ಆಣೆಕಟ್ಟು ವಿಚಾರವಾಗಿ ಆಂಧ್ರಪ್ರದೇಶಧ ಸಿಎಂ ಜೊತೆ ಚರ್ಚೆ ಮಾಡಲು ಮೂರು ಬಾರಿ ಪ್ರಯತ್ನ ಮಾಡಿದೆ. ಆದರೆ ಅವರು ಸಮಯ ನೀಡಲಿಲ್ಲ. ಈ ಅಣೆಕಟ್ಟಿನಲ್ಲಿ ಹೂಳು ತುಂಬಿರುವ ಪರಿಣಾಮ 30 ಟಿಎಂಸಿ ನೀರು ವ್ಯರ್ಥವಾಗುತ್ತಿದೆ. ಇದನ್ನು ಬಳಸಿಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ಆಂಧ್ರ ಪ್ರದೇಶ ಸಹಕಾರ ನೀಡುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ದೇಶದಲ್ಲಿ ರಾಮನ ತಂದೆ ದಶರಥ ಮಹಾರಾಜನಿಗಿಂತ ರಾಮನ ಭಂಟ ಹನುಮಂತನ ದೇವಾಲಯ ಎಲ್ಲ ಕಡೆ ಇವೆ. ಆಂಜನೇಯ ಸಮಾಜ ಸೇವಕ, ತ್ಯಾಗಿ. ಸಮಾಜದಲ್ಲಿ ಯಾರು ಸೇವೆ ಮಾಡುತ್ತಾರೋ ಸಮಾಜ ಅವರನ್ನು ಗುರುತಿಸುತ್ತದೆ. ಇದಕ್ಕೆ ಪಂಚಮುಖಿ ಆಂಜನೇಯನೇ ಸಾಕ್ಷಿ. ಹೀಗಾಗಿ ಜನರ ಮಧ್ಯೆ ನಿಷ್ಪಕ್ಷಪಾತವಾಗಿ, ಸೇವಾ ಮನೋಭಾವದಲ್ಲಿ ಕೆಲಸ ಮಾಡಿದರೆ ಸಮಾಜ ನಮ್ಮನ್ನು ಗುರುತಿಸುತ್ತದೆ’ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

‘ನಾನು ಉಪಮುಖ್ಯಮಂತ್ರಿಯಾಗಿರುವುದು, ದದ್ದಲ್ ಅವರು ಶಾಸಕ ಹಾಗೂ ನಿಗಮದ ಅಧ್ಯಕ್ಷರಾಗಿದ್ದಾರೆ. ಬೋಸರಾಜು ಅವರು ಶಾಸಕರಲ್ಲದಿದ್ದರೂ ಅವರನ್ನು ಸಚಿವರಾನ್ನಾಗಿ ಮಾಡಲಾಗಿದೆ. ಆವರು 45 ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದಾರೆ. ಹಗಲು ರಾತ್ರಿ ಪಕ್ಷ ಸಂಘಟನೆ ಮಾಡಿದ್ದಾರೆ’ ಎಂದರು.

ಬೂತ್ ನಲ್ಲಿ ಮುನ್ನಡೆ ತರುವವನೇ ನಾಯಕ

‘ಕಾರ್ಯಕರ್ತರ ಹೋರಾಟ ಬಿಜೆಪಿ ಹಾಗೂ ದಳದವರ ವಿರುದ್ಧ ಇರಬೇಕೆಹೊರತು ಕಾಂಗ್ರೆಸಿಗರ ವಿರುದ್ಧ ಅಲ್ಲ. ದ್ವೇಷ ಮುಖ್ಯ ಅಲ್ಲ, ಸಂಘಟನೆ ಮುಖ್ಯ‘ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

‘ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ನೀಡಿದೆ. ಬಿಜೆಪಿ ನಾಯಕರು ಇದನ್ನು ಟೀಕೆ ಮಾಡಿದರು. ಯಡಿಯೂರಪ್ಪ ಆವರು ಒಂದು ಅಕ್ಕಿ ಕಾಳು ಕಡಿಮೆಯಾದರೂ ನಾವು ಸಹಿಸುವುದಿಲ್ಲ ಎನ್ನುತ್ತಿದ್ದರು. ನಾವು ಮೊದಲ ಸಂಪುಟ ಸಭೆಯಲ್ಲಿ ಎಲ್ಲ ಯೋಜನೆ ಜಾರಿಗೆ ಅನುಮೋದನೆ ನೀಡಿದ್ದೇವೆ’ ಎಂದು ತಿಳಿಸಿದರು.

‘ಗ್ಯಾರಂಟಿಯಿಂದ ರಾಜ್ಯ ಸರ್ಕಾರ ದಿವಾಳಿಯಾಗುತ್ತದೆ ಎಂದರು. ನಂತರ ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿ ನಮ್ಮ ಯೋಜನೆ ನಕಲು ಮಾಡಿದ್ದಾರೆ. ಈಗ ಬಿಹಾರದಲ್ಲಿ ಮಹಿಳೆಯರಿಗೆ ಒಂದೇ ಬಾರಿಗೆ 10 ಸಾವಿರ ನೀಡುತ್ತಿದ್ದಾರೆ. ಆಮೂಲಕ ನಮ್ಮ ಗ್ಯಾರಂಟಿ ಯೋಜನೆಗಳನ್ನು ಆವರು ನಕಲು ಮಾಡುತ್ತಿದ್ದಾರೆ. ಆ ಮೂಲಕ ನೀವು ಜನರ ಬಳಿ ಹೋಗಲು ಶಕ್ತಿ ತುಂಬಿದ್ದೇವೆ’ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಜನರ ಕಲ್ಯಾಣಕ್ಕೆ ಪ್ರತಿ ವರ್ಷ 1 ಲಕ್ಷ ಕೋಟಿ ಹಣ:

‘ನೀರಾವರಿ ಯೋಜನೆ ಮೂಲಕ ನಿಮಗೆ ಸಹಾಯ ಮಾಡಲು ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಅದಕ್ಕೆ ಪ್ರತಿ ವರ್ಷ 20 ಸಾವಿರ ಕೋಟಿ ನೀಡುತ್ತಿದ್ದೇವೆ. 53 ಸಾವಿರ ಕೋಟಿ ಗ್ಯಾರಂಟಿ ಯೋಜನೆಗೆ ವೆಚ್ಚ ಮಾಡಿದ್ದೇವೆ. ಇನ್ನು ಬೇರೆ ಇಲಾಖೆಗಳ ಕಲ್ಯಾಣ ಯೋಜನೆಗಳು ಸೇರಿಸಿದರೆ ಪ್ರತಿ ವರ್ಷ ನಮ್ಮ ಸರ್ಕಾರ 1 ಲಕ್ಷ ಕೋಟಿ ಹಣವನ್ನು ಜನರ ಜೇಬಿಗೆ ಹಾಕುತ್ತಿದೆ’ ಎಂದು ತಿಳಿಸಿದರು.

'ಕಾಂಗ್ರೆಸ್ ಸರ್ಕಾರ ಇದ್ದಾಗ ಬ್ಯಾಂಕ್ ರಾಷ್ಟ್ರೀಕರಣ, ಆಹಾರ ಭದ್ರತಾ ಕಾಯ್ದೆ, ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ, ಪಿಂಚಣಿ ವ್ಯವಸ್ಥೆ, ನರೇಗಾ ನೀಡಿದೆವು. ಇಂತಹ ಒಂದು ಯೋಜನೆ ಬಿಜೆಪಿ ಆವರು ನೀಡಿದ್ದಾರಾ? ಬಡವರಿಗೆ ಸಹಾಯ ಮಾಡುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ’ ಎಂದು ತಿಳಿಸಿದರು.

‘ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧಿ ಆವರು ಕೂತ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಆವರು ಇಂದು ಕೂತಿದ್ದಾರೆ. ಆವರು ಈ ಭಾಗಕ್ಕೆ ಆರ್ಟಿಕಲ್ 371ಜೆ ಕೊಟ್ಟರು. ಆಡ್ವಾಣಿ ಆವರು ಇದು ಸಾಧ್ಯವಿಲ್ಲ ಎಂದು ಹೇಳಿದ್ದನ್ನು ಖರ್ಗೆ ಆವರು ಮಾಡಿ ತೋರಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳು ಕೇವಲ ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರವಲ್ಲ, ಎಲ್ಲಾ ಪಕ್ಷದವರಿಗೂ ತಲುಪುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತಿ ವರ್ಷ ಹೆಚ್ಚುವಾರಿಯಾಗಿ ₹5 ಸಾವಿರ ಕೋಟಿ ಅನುದಾನ ನೀಡಲಾಗುತ್ತಿದೆ" ಎಂದು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ, ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವ ಎನ್ಎಸ್ ಬೋಸರಾಜು, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್. ಸಂಸದ ಜಿ‌ ಕುಮಾರ ನಾಯಕ, ಶಾಸಕರಾದ ಹಂಪಯ್ಯ‌ ನಾಯಕ, ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ, ಶಾಸಕ ತುರುವಿಹಾಳ ಬಸನಗೌಡ, ಪಕ್ಷದ ಮುಖಂಡರು ಉಪಸ್ಥಿತರಿದ್ದರು.