
ರಾಯಚೂರು: ‘ವ್ಯಕ್ತಿಗಿಂತ ಪಕ್ಷ ಮುಖ್ಯ, ವ್ಯಕ್ತಿ ಪೂಜೆಗಿಂತ ಪಕ್ಷದ ಪೂಜೆ ಮಾಡಬೇಕು. ನಾನು ಎಂದಿಗೂ ಗುಂಪುಗಾರಿಕೆಯ ರಾಜಕಾರಣ ಮಾಡಿಲ್ಲ. ಮಾಡಿದ್ದರೆ ಏನೇನೋ ಮಾಡಬಹುದಿತ್ತು’ ಎಂದು ಉಪಮುಖ್ಯಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪಂಚಮುಖಿ ಗಾಣದಾಳ ಗ್ರಾಮದಲ್ಲಿ ಬುಧವಾರ ನಡೆದ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾಂಗ್ರೆಸ್ ಪಕ್ಷ ಇದ್ದರೆ ನಾವು–ನೀವು ಇರುತ್ತೇವೆ. ಪಕ್ಷದಿಂದಾಗಿ ನಾನು ಉಪಮುಖ್ಯಮಂತ್ರಿ, ದದ್ದಲ್ ಅವರು ಶಾಸಕ ಹಾಗೂ ನಿಗಮದ ಅಧ್ಯಕ್ಷರಾಗಿದ್ದಾರೆ. ಬೋಸರಾಜು ಅವರು ಶಾಸಕರಲ್ಲದಿದ್ದರೂ ಸಚಿವರಾನ್ನಾಗಿ ಮಾಡಲಾಗಿದೆ. ಅವರು 45 ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದಾರೆ. ತೆಲಂಗಾಣದಲ್ಲಿ ಪಕ್ಷಕ್ಕಾಗಿ ಶ್ರಮಿಸಿದ್ದಾರೆ. ಹಗಲು–ರಾತ್ರಿ ಪಕ್ಷ ಸಂಘಟನೆ ಮಾಡಿದ್ದಾರೆ’ ಎಂದರು.
‘ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಇರಬಾರದು. ಇಲ್ಲಿ ಕೇವಲ ಒಂದೇ ಗುಂಪು ಇದೆ; ಅದು ಕಾಂಗ್ರೆಸ್ ಗುಂಪು. 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಪಕ್ಷದ ಸಿದ್ಧಾಂತ, ನಾಯಕತ್ವದ ಮೇಲೆ ನಂಬಿಕೆ ಇಟ್ಟು ಬರುವ ಎಲ್ಲರನ್ನೂ ಸೇರಿಸಿಕೊಳ್ಳಿ’ ಎಂದು ಅವರು ಹೇಳಿದರು.
ಮಂತ್ರಾಲಯಕ್ಕೆ ಭೇಟಿ: ಸಭೆಗೂ ಮುನ್ನ ಡಿ.ಕೆ. ಶಿವಕುಮಾರ್ ಅವರು ಪತ್ನಿ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ಸುಬುಧೇಂದ್ರ ತೀರ್ಥರು ಸನ್ಮಾನಿಸಿ ಆಶೀರ್ವದಿಸಿದರು.
ನಂತರ ಅವರು ರಾಯಚೂರು ತಾಲ್ಲೂಕಿನ ಗಾಣದಾಳ ಗ್ರಾಮದ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.