ಸಿಂಧನೂರು: ಸಮೀಪದ ರಂಗಾಪುರ ಬಳಿ ಎಡದಂಡೆ ಕಾಲುವೆಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.
ಮೃತ ಮಹಿಳೆ ಗಂಗಾವತಿ ತಾಲ್ಲೂಕಿನ ಕಾರಟಗಿ ಪಟ್ಟಣದ ವಾಲ್ಮೀಕಿ ನಗರದ ನಿವಾಸಿ ಗಿರಿಜಮ್ಮ (28) ಎಂದು ಗುರುತಿಸಲಾಗಿದೆ.
ಗಿರಿಜಮ್ಮಳನ್ನು ಮೈಲಾಪುರ ಗ್ರಾಮದ ಮಂಜುನಾಥ ಎಂಬುವವರ ಜೊತೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ ಒಂದು ಖಾಲಿ ನಿವೇಶನ ಕೊಡುವುದಾಗಿ ಗಿರಿಜಮ್ಮಳ ಪೋಷಕರು ಭರವಸೆ ನೀಡಿದ್ದರು. ಮದುವೆಯ ನಂತರ ಅವರು ಕೊಡಲಿಲ್ಲ ಎನ್ನುವ ಕಾರಣಕ್ಕೆ ಆಗಾಗ್ಗೆ ನಿವೇಶನದ ವಿಷಯ ಪ್ರಸ್ತಾಪಿಸಿ ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮನೆಯಲ್ಲಿ ಏಕಾಏಕಿ ಕಾಣೆಯಾದ್ದರಿಂದ ತವರು ಮನೆಯವರು ಜೂ.28ರಂದು ಕಾರಟಗಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು.
ಜು.20 ರಂದು ಗಿರಿಜಮ್ಮಳ ಮೃತ ದೇಹ ರಂಗಾಪುರ ಬಳಿ ಎಡದಂಡೆ ಕಾಲುವೆಯಲ್ಲಿ ಪತ್ತೆಯಾಗಿದೆ. ನಂತರ ಗಿರಿಜಮ್ಮಳ ಸಹೋದರನು ಮೃತಳ ಗಂಡ ಮಂಜುನಾಥ, ಮಾವ ಅಂಬಣ್ಣ, ಅತ್ತೆ ಶಾಂತಮ್ಮ ಅವರು ಕೊಲೆಗೈದು ಕಾಲುವೆಗೆ ಎಸಗಿದ್ದಾರೆ ಎಂದು ದೂರು ನೀಡಿದ್ದು, ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಮವಾರ ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.