ADVERTISEMENT

ರಾಯಚೂರು: ಶುದ್ಧ ಕುಡಿಯುವ ನೀರಿಗಾಗಿ ಗ್ರಾ.ಪಂ.ಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2020, 13:24 IST
Last Updated 22 ಆಗಸ್ಟ್ 2020, 13:24 IST
ರಾಯಚೂರು ತಾಲ್ಲೂಕು ಗುಂಜಹಳ್ಳಿ ಗ್ರಾಮಸ್ಥರು ಶನಿವಾರ ಪ್ರತಿಭಟಿಸಿದರು.
ರಾಯಚೂರು ತಾಲ್ಲೂಕು ಗುಂಜಹಳ್ಳಿ ಗ್ರಾಮಸ್ಥರು ಶನಿವಾರ ಪ್ರತಿಭಟಿಸಿದರು.   

ರಾಯಚೂರು: ತಾಲ್ಲೂಕಿನ ಗುಂಜಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಪೂರೈಕೆ ಆಗುತ್ತಿದ್ದು, ಕುಡಿಯಲು ಯೋಗ್ಯವಿಲ್ಲ. ಶುದ್ಧ ನೀರು ಒದಗಿಸಬೇಕು ಹಾಗೂ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಡಾ.ಅಂಬೇಡ್ಕರ್ ಯುವಕ ಮಂಡಳಿ ನೇತೃತ್ವದಲ್ಲಿ ಗ್ರಾಮದ ಜನರು ಗ್ರಾಮ ಪಂಚಾಯಿತಿ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸಮಸ್ಯೆಯ ಅರಿವು ಇದ್ದರೂ ಸ್ಪಂದಿಸುತ್ತಿಲ್ಲ. ಅನಿವಾರ್ಯವಾಗಿ ಪ್ರತಿಭಟನೆ ಹಾದಿ ಹಿಡಿಯಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಶುದ್ಧ ನೀರು ಸೇವಿಸಿದ್ದರಿಂದ ಕೆಎಂಸಿ ಬಡಾವಣೆ ಜನರು ಕೆಲವು ದಿನಗಳಿಂದ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಬಡಾವಣೆಯಲ್ಲಿ ಕುಡಿಯುವನೀರಿಗಾಗಿ ಒಂದೇ ನಳವಿದೆ. ಇದರಿಂದ ಮಹಿಳೆಯರು ಮನೆಗೆಲಸ ಬಿಟ್ಟು ಸಾಲಾಗಿ ನಿಂತು ನಿಲ್ಲುವ ಪರಿಸ್ಥಿತಿ ಏರ್ಪಟ್ಟಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆತಿಲ್ಲ ಎಂದು ಪದಾಧಿಕಾರಿಗಳು ಹೇಳಿದರು.

ADVERTISEMENT

ಸಮರ್ಪಕವಾಗಿ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಬೇಕು. ಚರಂಡಿಗಳಲ್ಲಿ ಚಲನೆಯಿಲ್ಲದೆ ಕೊಳಚೆ ತುಂಬಿದ್ದು, ಸ್ವಚ್ಛತೆ ಮಾಡಬೇಕು ಎನ್ನುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಗ್ರಾಮಸ್ಥರಾದ ನರಸಿಂಹಲು, ಶಿವಾಜಿ, ಜಿ. ದುಳ್ಳಯ್ಯ, ಮಾರೆಪ್ಪ, ಅಜ್ಜಣ್ಣ, ಭೀಮೇಶ್, ಸತೀಶ್, ರಾಮು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.