ADVERTISEMENT

ರಾಯಚೂರು: ಮೌಢ್ಯದಿಂದ ಭೂತ ಬಂಗಲೆಯಾದ ಸಾಂಸ್ಕೃತಿಕ ಭವನ!

​ಪ್ರಜಾವಾಣಿ ವಾರ್ತೆ
Published 10 ಜುಲೈ 2023, 15:38 IST
Last Updated 10 ಜುಲೈ 2023, 15:38 IST
ಹಟ್ಟಿ ಹೊಸೂರು ಗ್ರಾಮದಲ್ಲಿ 20 ವರ್ಷಗಳ ಹಿಂದೆ ನಿರ್ಮಿಸಿದ ಸಾಂಸ್ಕೃತಿಕ ಭವನದ ದುಸ್ಥಿತಿ
ಹಟ್ಟಿ ಹೊಸೂರು ಗ್ರಾಮದಲ್ಲಿ 20 ವರ್ಷಗಳ ಹಿಂದೆ ನಿರ್ಮಿಸಿದ ಸಾಂಸ್ಕೃತಿಕ ಭವನದ ದುಸ್ಥಿತಿ    

ಹಟ್ಟಿಚಿನ್ನದಗಣಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಸಮೀಪದ ಹಟ್ಟಿ ಹೊಸೂರು ಗ್ರಾಮದಲ್ಲಿ 20 ವರ್ಷಗಳ ಹಿಂದೆ ನಿರ್ಮಾಣ ಮಾಡಲಾದ ಸಾಂಸ್ಕೃತಿಕ ಭವನವನ್ನು ಸಾರ್ವಜನಿಕರು ಮೌಢ್ಯದ ಕಾರಣದಿಂದ ಸದುಪಯೋಗ ಮಾಡಿಕೊಳ್ಳದಿದ್ದರಿಂದ ಭೂತ ಬಂಗಲೆಯಾಗಿ, ಪುಂಡ-ಪೋಕರಿಗಳ ತಾಣವಾಗಿದೆ.

ಹಟ್ಟಿ ಹೊಸೂರು ಗ್ರಾಮದ ಜನತೆಯ ಅನುಕೂಲಕ್ಕಾಗಿ ₹10 ಲಕ್ಷ ವೆಚ್ಚದಲ್ಲಿ ಸಾಂಸ್ಕೃತಿಕ ಭವನ ನಿರ್ಮಿಸಲಾಗಿತ್ತು. ಗ್ರಾಮದಲ್ಲಿ ಏನೇ ಕಾರ್ಯಕ್ರಮ ಇದ್ದರೂ ಜನತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಭವನ ನಿರ್ಮಿಸಲಾಗಿತ್ತು. ಆದರೆ ಒಂದು ದಿನವೂ ಬಳಕೆಗೆ ಬಂದಿಲ್ಲ ಎಂದು ಗ್ರಾಮಸ್ಧರು ಹೇಳುತ್ತಾರೆ.

ಗ್ರಾಮದ ಹೊರ ಹೊಲಯದಲ್ಲಿ ಈ ಭವನ 1998ರಲ್ಲಿ ನಿರ್ಮಾಣ ಮಾಡಲಾಗಿದೆ. ಸಾಂಸ್ಕೃತಿಕ ಭವನ ಊರ ಹೊರಗಿದೆ. ಜತೆಗೆ ಸ್ಮಶಾನದ ಪಕ್ಕದಲ್ಲಿದೆ ಎಂದು ಮೌಢ್ಯಗಳನ್ನು ನಂಬುವ ಜನತೆ  ಬಳಕೆ ಮಾಡಲು ಹಿಂಜರಿದಿದ್ದಾರೆ. ಮದುವೆ ಅಥವಾ ಇತರ ಕಾರ್ಯಕ್ರಮಗಳು ನಡೆದಾಗ ಜನವಸತಿಗಾಗಿ ಭವನ ನಿರ್ಮಿಸಲಾಗಿದ್ದರೂ ಜನತೆ ಮಾತ್ರ ಇದರ ಬಳಕೆಗೆ ಮುಂದೆ ಬಾರದಿರುವುದು ನಡೆದಿದೆ. ₹20 ವರ್ಷಗಳಿಂದ ಆ ಭವನ ಪಾಳು ಬಿದ್ದಿದೆ ಎಂದು ಆದಪ್ಪ, ಶಿವಪ್ಪ, ಅಮರೇಶ, ಗ್ರಾಮಸ್ಧರು ತಿಳಿಸುತ್ತಾರೆ.

ADVERTISEMENT

ಜನತೆ ಭವನ ಬಳಕೆಗೆ ಹಿಂದೇಟು ಹಾಕಿದ್ದರಿಂದ ಭವನ ಇದೀಗ ಸಂಪೂರ್ಣವಾಗಿ ಪಾಳು ಬಿದ್ದಿದೆ. ಭವನದ ಎಲ್ಲಾ ಬಾಗಿಲು, ಕಿಟಕಿಗಳು ಸೇರಿದಂತೆ ಇತರ ಸಾಮಾಗ್ರಿ ಸಂಪೂರ್ಣ ಹಾಳಾಗಿವೆ. ಗ್ರಾಮದ ಪುಂಡ-ಪೋಕರಿಗಳಿಗೆ ಆಶ್ರಯ ತಾಣವಾಗಿದ್ದು, ಅದರಲ್ಲಿ ಮದ್ಯಸೇವನೆ ಸೇರಿದಂತೆ ನಾನಾ ಅನೈತಿಕ ಚಟುವಟಿಕೆಗಳು ನಡೆಯುವಂತಾಗಿದೆ ಎಂದು ಹೇಳುತ್ತಾರೆ. ಮೌಢ್ಯದಿಂದಾಗಿ ಕಟ್ಟಡ ಬಳಕೆಗೆ ಬಾರದಂತಾಗಿ, ಸರ್ಕಾರದ ಹಣ ವ್ಯರ್ಥವಾದಂತಾಗಿದೆ.

ಅಮರೇಗೌಡ ಬಯ್ಯಾಪುರ ಪಾಟೀಲ್ ಶಾಸಕರಾಗಿದ್ದಾಗ ಈ ಭವನವನ್ನು ನಿರ್ಮಿಸಿದ್ದರು. ಜನರು ಅದರ ಸದ್ಬಳಕೆಗೆ ಮುಂದಾಗುವಂತೆ ಪ್ರಜ್ಞಾವಂತರು ಜಾಗೃತಿ ಮೂಡಿಸಬೇಕಾಗಿದೆ ಬಸವರಾಜ ಭೋವಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.