ADVERTISEMENT

ಹಕ್ಕು, ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳು: ನ್ಯಾಯಾಧೀಶ ಎಂ.ಸಿ.ನಾಡಗೌಡ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 14:34 IST
Last Updated 10 ಡಿಸೆಂಬರ್ 2019, 14:34 IST
ರಾಯಚೂರಿನ ಜಿಲ್ಲಾ ಕಾರಾಗೃಹದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಎಂ.ಸಿ.ನಾಡಗೌಡ ಮಾತನಾಡಿದರು
ರಾಯಚೂರಿನ ಜಿಲ್ಲಾ ಕಾರಾಗೃಹದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಎಂ.ಸಿ.ನಾಡಗೌಡ ಮಾತನಾಡಿದರು   

ರಾಯಚೂರು: ಸಂವಿಧಾನ ನೀಡಿದ ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು, ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಎಂ.ಸಿ.ನಾಡಗೌಡ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರಾಗೃಹ ಹಾಗೂ ಕರ್ನಾಟಕ ಮಾನವ ಹಕ್ಕುಗಳ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ’ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.

ಕಾನೂನನ್ನು ಗೌರವಿಸಿದರೆ ಮಾತ್ರ ನಮ್ಮನ್ನು ಕಾನೂನು ಗೌರವಿಸುತ್ತದೆ. ಕಾನೂನು ಎಲ್ಲರಿಗೂ ಸಮಾನವಾಗಿದ್ದು, ಕಾನೂನಿನ ಅಡಿಯಲ್ಲಿ ವ್ಯವಸ್ಥಿವಾಗಿ ಜೀವನ ನಡೆಸಿದರೆ ಮಾತ್ರ ಸಮಾಜದಲ್ಲಿ ಗೌರವಯುತವಾಗಿ ಬಾಳಲು ಸಾಧ್ಯ ಎಂದರು.

ADVERTISEMENT

ನ್ಯಾಯಾಲಯದಲ್ಲಿ ನ್ಯಾಯ ನಿರ್ಣಯ ಆಗುವವರೆಗೆ ವಿಚಾರಣಾ ಬಂಧಿ ಕೈದಿಗಳು. ಕಾನೂನು ಹಕ್ಕು ಮತ್ತು ಕರ್ತವ್ಯಗಳನ್ನು ಎಲ್ಲರಿಗೂ ನೀಡಿದೆ. ಮೂಲ ಸೌಲಭ್ಯಗಳನ್ನು ಪಡೆಯುವುದು ಹಕ್ಕು ಹಾಗೂ ಇದರ ಜೊತೆಗೆ ಕರ್ತವ್ಯಗಳನ್ನು ಸಹ ಪಾಲಿಸಬೇಕು. ಸಮಾಜದಲ್ಲಿ ಕಾನೂನಿನ ಅರಿವು ಇಲ್ಲದೇ ಇರುವುದರಿಂದ ಅಪರಾಧಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರಾಗೃಹ ಅಧಿಕಾರಿ ಬಿ.ಆರ್ ಅಂದಾನಿ ಮಾತನಾಡಿ, ಕಾರಾಗೃಹದಿಂದ ಬಿಡುಗಡೆಯಾದ ನಂತರ ಉತ್ತಮ ಜೀವನ ನಡೆಸಲು ಕಲಿಕಾ ಸಮಿತಿಯಿಂದ ಅಕ್ಷರಭ್ಯಾಸವನ್ನು ನೀಡಲಾಗುತ್ತಿದೆ. ಕೈದಿಗಳು ಕಾರಾಗೃಹದಲ್ಲಿ ಇರುವವರೆಗೂ ಹಲವು ವಿಷಯಗಳನ್ನು ಕಲಿತು ಸುಧಾರಣೆಯಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಮಾನವ ಹಕ್ಕುಗಳ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಮುಹೀದ, ಜಿಲ್ಲಾ ಕಾರಾಗೃಹದ ಉಪ ಅಧೀಕ್ಷಕ ಅಬ್ದುಲ್ ಶುಕೂರ್, ವೈದ್ಯ ಡಾ.ವಿಶ್ವನಾಥ, ವಕೀಲ ಪ್ರಭು ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.