ADVERTISEMENT

ಸಾಮಾಜಿಕ ಚಿಂತನೆಗೆ ಶಿಕ್ಷಣ ಅಗತ್ಯ: ಶರಣಪ್ಪ ಎಸ್.ಮಾಳಗಿ

ಬಾಬು ಜಗಜೀವನರಾಮ್ ಜಯಂತಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 13:27 IST
Last Updated 5 ಏಪ್ರಿಲ್ 2019, 13:27 IST
ರಾಯಚೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಫರಹತಾಬಾದನ ಸರ್ಕಾರಿ ಕಾಲೇಜು, ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥ ಶರಣಪ್ಪ ಎಸ್.ಮಾಳಗಿ ಮಾತನಾಡಿದರು
ರಾಯಚೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಫರಹತಾಬಾದನ ಸರ್ಕಾರಿ ಕಾಲೇಜು, ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥ ಶರಣಪ್ಪ ಎಸ್.ಮಾಳಗಿ ಮಾತನಾಡಿದರು   

ರಾಯಚೂರು: ಸಾಮಾಜಿಕ ಚಿಂತನೆಗೆ ಶಿಕ್ಷಣ ಅತ್ಯಂತ ಅವಶ್ಯಕವಾಗಿದ್ದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಾರಿದ ಮಹಾನ್‌ ವ್ಯಕ್ತಿಗಳಲ್ಲಿ ಬಾಬು ಜಗಜೀವನರಾಮ್‌ ಕೂಡ ಒಬ್ಬರಾಗಿದ್ದಾರೆ ಎಂದು ಫರಹತಾಬಾದ್‌ ಸರ್ಕಾರಿ ಕಾಲೇಜು, ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥ ಶರಣಪ್ಪ ಎಸ್.ಮಾಳಗಿ ಹೇಳಿದರು.

ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಬಾಬು ಜಗಜೀವನರಾಮ್‌ 112ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದ ಪರವಾಗಿ ಕಾಳಜಿಯೊಂದಿಗೆ ದೇಶದ ಉದ್ಧಾರ, ಮನುಕುಲ ಹಾಗೂ ದಲಿತರಿಗಾಗಿ ಹಗಲಿರಳು ಹೋರಾಡಿದ ಕೀರ್ತಿ ಬಾಬು ಜಗಜೀವನರಾಮ್ ಅವರಿಗೆ ಸಲ್ಲುತ್ತದೆ. ಅವರು ವ್ಯಕ್ತಿ ಮಾತ್ರವಲ್ಲದೇ ಒಂದು ಶಕ್ತಿಯಾಗಿದ್ದರು ಎಂದರು.

ADVERTISEMENT

ಜಾತಿಯತೆ ಸಮಾಜದ ಕುಂಠಿತಕ್ಕೆ ಪೂರಕವಾಗಿದ್ದು, ಭಾವಕ್ಯತೆಯನ್ನು ಹಾಳು ಮಾಡುತ್ತದೆ. ಇದರ ಪರಿಣಾಮದಿಂದ ಸಮೃದ್ಧ ರಾಷ್ಟ್ರ ನಿರ್ಮಾಣವಾಗದು. ವರ್ಗ, ಜಾತಿ, ತಾರತಮ್ಯವನ್ನು ನಿವಾರಿಸುವಂತಹ ಶಿಕ್ಷಣ ಅಗತ್ಯವಾಗಿದೆ. ದುಶ್ಚಟಗಳಿಂದ ದೂರವಿದ್ದು, ಶಾಂತಿಯಿಂದ ಕ್ರಾಂತಿ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಬಸವಣ್ಣ, ಬಾಬು ಜಗಜೀವನರಾಮ್, ಅಂಬೇಡ್ಕರ್, ಕಬೀರದಾಸ್, ಕನಕದಾಸ ಸೇರಿದಂತೆ ಇನ್ನಿತರ ಮಹನೀಯರ ಜಯಂತಿ ಆಚರಣೆ ಮಾಡುವುದರ ಜೊತೆಗೆ ಅವರ ಇತಿಹಾಸ ಹಾಗೂ ಅವರ ಬಗೆಗಿನ ಗ್ರಂಥಗಳನ್ನು ತೆರೆದ ಮನಸ್ಸಿನಿಂದ ನೋಡಬೇಕಾಗಿದೆ ಎಂದರು.

ಹಲವು ಚಿಂತಕರು ಬಾಬು ಜಗಜೀವನರಾಮ್ ಕುರಿತು ಗ್ರಂಥಗಳನ್ನು ರಚಿಸಿದ್ದಾರೆ. ಮಹನೀಯರ ಬಗ್ಗೆ ಪುಸ್ತಕಗಳನ್ನು ಓದಿ ತಿಳಿದುಕೊಳ್ಳುವುದು ಆಧುನಿಕ ಯುಗದಲ್ಲಿ ಬಹಳ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಹಾಗೂ ಇತರರು ಇದ್ದರು.

ಮೆರವಣಿಗೆ:

ನಗರದ ಸ್ಟೇಷನ್ ವೃತ್ತದಲ್ಲಿ ಬಾಬು ಜಗಜೀವನರಾಮ್‌ ಪುತ್ಥಳಿಗೆ ಮಾಲಾರ್ಪಣೆಯ ನಂತರ ನಡೆದ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಬಿ.ಶರತ್ ಚಾಲನೆ ನೀಡಿದರು. ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದವರೆಗೆ ಮೆರವಣಿಗೆ ನಡೆಯಿತು.

ಉಪ ವಿಭಾಗಾಧಿಕಾರಿ ಶಿಲ್ಪಾ ಶರ್ಮಾ, ಪೌರಾಯುಕ್ತ ರಮೇಶ ನಾಯಕ, ಅಧಿಕಾರಿಗಳು ಹಾಗೂ ಜನರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.