ADVERTISEMENT

ವಟಗಲ್‍, ಅಮೀನಗಡ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 12:28 IST
Last Updated 31 ಆಗಸ್ಟ್ 2021, 12:28 IST
ಕವಿತಾಳದ ಅಮೀನಗಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮೌನೇಶ ದೊಡ್ಮನಿ ಮತ್ತು ಉಪಾಧ್ಯಕ್ಷೆಯಾಗಿ ಈರಮ್ಮ ವಿರೇಶ  ಆಯ್ಕೆಯಾದ ನಂತರ ಗೆಲುವಿನ ನಗೆ ಬೀರಿದರು
ಕವಿತಾಳದ ಅಮೀನಗಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮೌನೇಶ ದೊಡ್ಮನಿ ಮತ್ತು ಉಪಾಧ್ಯಕ್ಷೆಯಾಗಿ ಈರಮ್ಮ ವಿರೇಶ  ಆಯ್ಕೆಯಾದ ನಂತರ ಗೆಲುವಿನ ನಗೆ ಬೀರಿದರು   

ಕವಿತಾಳ: ಮಸ್ಕಿ ತಾಲ್ಲೂಕಿನ ವಟಗಲ್‍ ಮತ್ತು ಅಮೀನಗಡ ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಂಗಳವಾರ ನಡೆಯಿತು.

ಅಮೀನಗಡ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಮೌನೇಶ ದೊಡ್ಮನಿ (ಸಾಮಾನ್ಯ) ಮತ್ತು ಉಪಾಧ್ಯಕ್ಷೆಯಾಗಿ ಈರಮ್ಮ ವಿರೇಶ (ಪರಿಶಿಷ್ಟ ಪಂಗಡ) ಆಯ್ಕೆಯಾದರು. ಒಟ್ಟು 15 ಸದಸ್ಯ ಬಲ ಹೊಂದಿದ್ದು ಒಬ್ಬ ಸದಸ್ಯೆ ಈಚೆಗೆ ಮೃತಪಟ್ಟ ಹಿನ್ನೆಲೆಯಲ್ಲಿ 14 ಜನರು ಹಾಜರಿದ್ದರು. ಕಾಂಗ್ರೆಸ್‍ ಬೆಂಬಲಿತ ಅಭ್ಯರ್ಥಿಯಾಗಿ ನಾಮ ಪತ್ರಸಲ್ಲಿಸಿದ್ದ ಮೌನೇಶ ದೊಡ್ಮನಿ 8 ಮತ ಪಡೆದು ಆಯ್ಕೆಯಾದರೆ ಬಿಜೆಪಿ ಬೆಂಬಲಿತ ಪ್ರತಿಸ್ಪರ್ಧಿ ಹಂಪಮ್ಮ ನಾಗಪ್ಪ 6 ಮತ ಪಡೆದು ಸೋತರು.

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ ಬೆಂಬಲಿತ ಅಭ್ಯರ್ಥಿಯಾಗಿ ಈರಮ್ಮ ವೀರೇಶ ಮತ್ತು ಬಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಭೀಮಮ್ಮ ಭೀಮಪ್ಪ ಸ್ಪರ್ಧಿಸಿದ್ದರು. ತಲಾ 7 ಮತ ಪಡೆದ ಹಿನ್ನೆಲೆಯಲ್ಲಿ ಚೀಟಿ ತೆಗೆದಾಗ ಈರಮ್ಮ ವೀರೇಶ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಮಸ್ಕಿ ತಹಶೀಲ್ದಾರ್ ಕವಿತಾ. ಆರ್ ಹೇಳಿದರು.

ADVERTISEMENT

ವಟಗಲ್‍ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಸೀತಮ್ಮ ಬಸವರಾ ವಟಗಲ್‍ (ಪರಿಶಿಷ್ಟ ಪಂಗಡ ಮಹಿಳೆ) ಮತ್ತು ಉಪಾಧ್ಯಕ್ಷರಾಗಿ ಬಸಾಪುರ ಗ್ರಾಮದ ಬಸನಗೌಡ ಬಾಲರಡ್ಡಿ (ಸಾಮಾನ್ಯ) ಅವಿರೋಧವಾಗಿ ಆಯ್ಕೆಯಾದರು. ಒಟ್ಟು 14 ಜನ ಸದಸ್ಯರಲ್ಲಿ ಇಬ್ಬರು ಸದಸ್ಯರು ಗೈರಾಗಿದ್ದರು. ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದೆ ಎಂದು ಚುನಾವಣಾಧಿಕಾರಿಯಾಗಿದ್ದ ಮಸ್ಕಿ ಗ್ರೇಡ್‍-2 ತಹಶೀಲ್ದಾರ್ ಪ್ರಭಾಕರ್ ಭಟ್‍ ತಿಳಿಸಿದರು.

ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಮುಖಂಡರು ಮಾಲಾರ್ಪಣೆ ಮಾಡಿ ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.