ADVERTISEMENT

ಲಿಂಗಸುಗೂರು: ₹64.30 ಕೋಟಿ ವಿದ್ಯುತ್ ಬಿಲ್ ಬಾಕಿ

ಗ್ರಾಹಕರಿಂದ ಬಾಕಿ ಬಿಲ್ ವಸೂಲಿಗೆ ಸಿಬ್ಬಂದಿ ಹರಸಾಹಸ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 7:12 IST
Last Updated 12 ಜುಲೈ 2025, 7:12 IST
ಲಿಂಗಸುಗೂರು ಜೆಸ್ಕಾಂ ಕಚೇರಿ
ಲಿಂಗಸುಗೂರು ಜೆಸ್ಕಾಂ ಕಚೇರಿ   

ಲಿಂಗಸುಗೂರು: ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಕೋಟ್ಯಂತರ ಹಣ ಬಾಕಿ ಇರುವ ವಿದ್ಯುತ್ ಬಿಲ್‌ ವಸೂಲಿಗೆ ಜೆಸ್ಕಾಂ ಕಚೇರಿಯಲ್ಲಿನ ಎಲ್ಲ ಸಿಬ್ಬಂದಿ ವಿವಿಧ ಇಲಾಖೆ ಕಚೇರಿಗೆ, ಮನೆಗಳಿಗೆ ಅಲೆದಾಡಿ ಹರಸಾಹಸ ಪಡುವಂತಾಗಿದೆ.

ತಾಲ್ಲೂಕಿನಲ್ಲಿ 38,835 ಮನೆಗಳು, 6,653 ವಾಣಿಜ್ಯ ಹಾಗೂ ಗಿರಣಿ, ಸಾಮಿಲ್ ಸೇರಿ ಇತರೆ 1,253 ವಿದ್ಯುತ್ ಸಂಪರ್ಕಗಳಿವೆ. ಪುರಸಭೆ ಹಾಗೂ ಗ್ರಾ.ಪಂ ವ್ಯಾಪ್ತಿಯಲ್ಲಿ ಬೀದಿ ದೀಪಗಳು ಹಾಗೂ ಕುಡಿಯುವ ನೀರಿಗೆ ಪ್ರತ್ಯೇಕ ವಿದ್ಯುತ್ ಬಿಲ್ ನೀಡಲಾಗುತ್ತಿದೆ.

ಸರ್ಕಾರಿ ಇಲಾಖೆಗಳಿಂದಲೇ ₹56 ಕೋಟಿ ಬಾಕಿ: ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳು, ಲಿಂಗಸುಗೂರು, ಮುದಗಲ್ ಪುರಸಭೆ ಹಾಗೂ ಹಟ್ಟಿ ಪಟ್ಟಣ ಪಂಚಾಯಿತಿಯಲ್ಲಿನ ಕುಡಿಯುವ ನೀರು ಸರಬರಾಜು ಹಾಗೂ ಬೀದಿ ದೀಪಗಳ, ನಂದವಾಡಗಿ ಏತ ನೀರಾವರಿ ಯೋಜನೆ, ಜಲದುರ್ಗ ಏತ ನೀರಾವರಿ ಯೋಜನೆ, ರಾಂಪುರ ಏತ ನೀರಾವರಿ ಯೋಜನೆಗಳ ವಿದ್ಯುತ್ ಬಿಲ್ ಬರೊಬ್ಬರಿ ₹56.53 ಕೋಟಿ ಉಳಿಸಿಕೊಂಡಿವೆ.

ADVERTISEMENT

ಇದಲ್ಲದೆ ತಾಲ್ಲೂಕಿನ ಮನೆಗಳ ಬಿಲ್ ಬಾಕಿ ₹5.63 ಕೋಟಿ, ವಾಣಿಜ್ಯ ಬಾಕಿ ₹1.41 ಕೋಟಿ, ಪವರ್ ₹73.95 ಲಕ್ಷ ಸೇರಿ ಒಟ್ಟು ₹64.30 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿದುಕೊಂಡಿದೆ. ಇದರಿಂದ ಜೆಸ್ಕಾಂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಸರ್ಕಾರ ಮುಲಾಜಿಲ್ಲದೇ ಬಾಕಿ ಉಳಿಸಿಕೊಂಡ ಇಲಾಖೆಗೆ ಕಟ್ಟುನಿಟ್ಟನ ಆದೇಶ ಹೊರಡಿಸಿ ಬಾಕಿ ಪಾವತಿಗೆ ತಾಕೀತು ಮಾಡಿದರೆ ಜೆಸ್ಕಾಂ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು.

₹5 ಸಾವಿರ ಮೇಲಿದ್ದರೆ ಸಂಪರ್ಕ ಕಡಿತ: ತಿಂಗಳುಗಟ್ಟಲೇ ವಿದ್ಯುತ್ ಬಿಲ್ ಬಾಕಿ ಇರುವ ಬಗ್ಗೆ ಜೆಸ್ಕಾಂ ಮೇಲಧಿಕಾರಿಗಳು ಬಿಲ್ ವಸೂಲಿ ಮಾಡಿ ಇಲ್ಲವೇ ವೇತನ ಕಡಿತ ಮಾಡುವುದಾಗಿ ಇಲ್ಲಿನ ಜೆಸ್ಕಾಂ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದರಿಂದ ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ₹5 ಸಾವಿರ ಮೇಲ್ಪಟ್ಟು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಮನೆ, ವಾಣಿಜ್ಯ, ಪವರ್ ಗ್ರಾಹಕರ ಸಂಪರ್ಕ ಕಡಿತ ಮಾಡಲು ಜೆಸ್ಕಾಂ ಕಠಿಣ ನಿರ್ಧಾರಕ್ಕೆ ಮುಂದಾಗಿದೆ ಎನ್ನಲಾಗಿದೆ.

ಬಾಕಿ ವಸೂಲಿ ಮಾಡಲು ಸ್ವತಃ ಜೆಸ್ಕಾಂ ಎಇಇ ಸಮೇತ ಎಲ್ಲಾ ಸಿಬ್ಬಂದಿ ಮನೆ, ವಾಣಿಜ್ಯ, ಪವರ್ ಗ್ರಾಹಕರಲ್ಲಿ ಅಲೆದಾಡುವಂತಾಗಿದೆ. ರಾಜ್ಯ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್‌ ನೀಡುವ ಗೃಹಜ್ಯೋತಿ ಯೋಜನೆ ಜಾರಿಗೆ ತಂದಿದ್ದರಿಂದ ಉಳಿದವರು ಬಿಲ್ ಪಾವತಿ ಮಾಡಲು ಹಿಂದೇಟು ಹಾಕುತ್ತಿದ್ದರಿಂದ ಜೆಸ್ಕಾಂ ಸಿಬ್ಬಂದಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಬಿಲ್ ಪಾವತಿ ಮಾಡುವಂತೆ ಮನವೂಲಿಸಲು ಹರಸಾಹಸ ಪಡುವಂತಾಗಿದೆ.

ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾ.ಪಂ ಪುರಸಭೆಗಳಿಗೆ ಪತ್ರ ಬರೆಯಲಾಗಿದೆ. ಇನ್ನುಳಿದ ವಿದ್ಯುತ್ ಸಂಪರ್ಕಗಳ ಬಾಕಿ ಬಿಲ್ ವಸೂಲಿಗೆ ಕಠಿಣ ಕ್ರಮ ಜರಗಿಸಲಾಗುತ್ತಿದೆ
ಬನ್ನೆಪ್ಪ ಕರಿಬಂಟನಾಳ ಜೆಸ್ಕಾಂ ಎಇಇ ಲಿಂಗಸುಗೂರು

ಜನಸಾಮಾನ್ಯರಿಗೊಂದು ಇಲಾಖೆಗೊಂದು ನ್ಯಾಯವೇ?:

‘ಸರ್ಕಾರದ ಅಂಗ ಸಂಸ್ಥೆಗಳೇ ಕೋಟ್ಯಂತರ ಬಿಲ್‌ ಬಾಕಿ ಉಳಿಸಿಕೊಂಡರೆ ಹೇಗೆ? ಜನಸಾಮಾನ್ಯರು ಒಂದು ತಿಂಗಳಿನ ವಿದ್ಯುತ್ ಬಿಲ್ ಪಾವತಿಸಲು ವಿಫಲರಾದರೆ ಮರುದಿನವೇ ಸಂಪರ್ಕ ಕಡಿತಗೊಳ್ಳುತ್ತದೆ. ಅದೇ ಸರ್ಕಾರಿ ಇಲಾಖೆಗಳೇ ಈ ರೀತಿ ಬಾಕಿ ಉಳಿಸಿಕೊಂಡರೆ ಏನು ಕ್ರಮ? ಅಲ್ಲದೇ ಪಟ್ಟಣದ ಚುನಾಯಿತ ಪ್ರತಿನಿಧಿಯೊಬ್ಬರು ₹1 ಲಕ್ಷ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರೂ ಯಾವುದೇ ಕ್ರಮಕ್ಕೆ ಜೆಸ್ಕಾಂ ಮುಂದಾಗಿಲ್ಲ’ ಎಂದು ಕರವೇ ಸ್ವಾಭಿಮಾನಿ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಜಿಲಾನಿ ಪಾಶಾ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.