ADVERTISEMENT

ಆನೆ ಬಳಕೆ: ಒಂದಕ್ಕೆ ಮಾತ್ರ ಅನುಮತಿ, ನಾಲ್ಕು ಬಾಕಿ

ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಅಂಬಾರಿ ಮೆರವಣಿಗೆ

ಚಂದ್ರಕಾಂತ ಮಸಾನಿ
Published 30 ಸೆಪ್ಟೆಂಬರ್ 2025, 3:10 IST
Last Updated 30 ಸೆಪ್ಟೆಂಬರ್ 2025, 3:10 IST
ಸಿಂಧನೂರಲ್ಲಿ 2024ರಲ್ಲಿ ನಡೆದ ದಸರಾ ಉತ್ಸವದಲ್ಲಿ ಆನೆಯ ಮೇಲೆ ಅಂಬಾದೇವಿ ಅಂಬಾರಿ ಮೆರವಣಿಗೆ ನಡೆಸಿದ ದೃಶ್ಯ
ಸಿಂಧನೂರಲ್ಲಿ 2024ರಲ್ಲಿ ನಡೆದ ದಸರಾ ಉತ್ಸವದಲ್ಲಿ ಆನೆಯ ಮೇಲೆ ಅಂಬಾದೇವಿ ಅಂಬಾರಿ ಮೆರವಣಿಗೆ ನಡೆಸಿದ ದೃಶ್ಯ   

ರಾಯಚೂರು: ರಾಜಾಡಳಿತದಲ್ಲಿ ಸೈನ್ಯದಲ್ಲಿ ಆನೆಗಳನ್ನು ಬಳಸುತ್ತಿದ್ದರಿಂದ ಎಡೆದೊರೆ ನಾಡಿನಲ್ಲಿ ಒಂದು ಕಾಲದಲ್ಲಿ ಸಾವಿರಾರು ಆನೆಗಳು ಇದ್ದವು. ಆನೆಗಳ ಮೇಲಿನ ವ್ಯಾಮೋಹಕ್ಕೆ ಕಲ್ಲಾನೆಗಳನ್ನೂ ಕೆತ್ತಲಾಯಿತು. ಆದರೂ ಜಿಲ್ಲೆಯ ಜನರಲ್ಲಿ ಆನೆಗಳ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ವನ್ಯ ಜೀವಿಗಳ ಸಂರಕ್ಷಣಾ ಕಾ‌ಯ್ದೆಯನ್ನು ಬಿಗಿಗೊಳಿಸಿದರೂ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಹಬ್ಬದ ಮೆರವಣಿಗೆಗೆ ಆನೆಗಳನ್ನು ತರಿಸುವುದು ಹೆಚ್ಚಾಗುತ್ತಿದೆ.

ಜಿಲ್ಲೆಯ ನಾಲ್ಕು ಗ್ರಾಮಗಳಲ್ಲಿ ವಿಜಯ ದಶಮಿಗೆ ಸಾಕು ಆನೆಗಳನ್ನು ಕರೆ ತರಿಸಿ ಮೆರವಣಿಗೆ ನಡೆಸುವ ಸಂಪ್ರದಾಯ ಇದೆ. ಇದೀಗ ಎರಡು ವರ್ಷಗಳಿಂದ ಸಿಂಧನೂರಿನಲ್ಲಿ ಸಂಪ್ರದಾಯ ಆರಂಭಿಸಲಾಗಿದೆ.

ವಿಜಯ ದಶಮಿ ಪ್ರಯುಕ್ತ ಸಿರವಾರ ತಾಲ್ಲೂಕಿನ ಹೀರಾ, ಮಾನ್ವಿ ಪಟ್ಟಣದ ಕಲ್ಮಠ, ತಾಲ್ಲೂಕಿನ ಕರೆಗುಡ್ಡ, ಮಸ್ಕಿ ಭ್ರಮರಾಂಬದೇವಿ ಮೆರವಣಿಗೆಗೆ ಆನೆ ಬಳಸಿಕೊಳ್ಳುವ ಸಂಪ್ರದಾಯವಿದೆ.

ADVERTISEMENT

ರಾಯಚೂರಿನ ಡಿಸಿಎಫ್‌ ಕಚೇರಿ ಮೂಲಕ ಬೆಂಗಳೂರಿನ ಅರಣ್ಯ ಭವನಕ್ಕೆ ಅನುಮತಿ ಕೋರಿ ಪತ್ರ ಬರೆಯಲಾಗಿದೆ. ಇವುಗಳಿಗೆ ಇನ್ನೂ ಅನುಮತಿ ದೊರೆತಿಲ್ಲ. ಹಬ್ಬದ ವೇಳೆಗೆ ಅನುಮತಿ ದೊರೆಯುವ ನಿರೀಕ್ಷೆ ಇದೆ ಎಂದು ಕಲ್ಮಠದ ಭಕ್ತರು ತಿಳಿಸಿದರು.

ಸಿಂಧನೂರು ತಾಲ್ಲೂಕಿನಲ್ಲಿ ನಡೆಯುವ ಅಂಬಾದೇವಿ ಮೆರವಣಿಗೆಗೆ ಆನೆ ಬಳಸಲು ಅರಣ್ಯ ಇಲಾಖೆಗೆ ಕೇಳಿದ್ದ ಅನುಮತಿಗೆ ಮಾತ್ರ ಅರಣ್ಯ ಭವನ ಹಸಿರು ನಿಶಾನೆ ತೋರಿಸಿದೆ. ಇನ್ನೂ ನಾಲ್ಕು ಅರ್ಜಿಗಳಿಗೆ ಒಪ್ಪಿಗೆ ಸಿಗುವುದು ಬಾಕಿ ಇದೆ.

ಸಿರವಾರ ತಾಲ್ಲೂಕಿನ ಹೀರಾ, ಮಾನ್ವಿ ನಗರದ ಕಲ್ಮಠ, ತಾಲ್ಲೂಕಿನ ಕರೆಗುಡ್ಡದಲ್ಲಿ ನಡೆಯುವ ರಾಯಚೂರು ತಾಲ್ಲೂಕಿನ ಬಿಚ್ಚಾಲಿಮಠ ಅಥವಾ ಹಂಪಿ ಆನೆಯನ್ನೇ ಬಳಸಲಾಗುತ್ತಿದೆ. ಅರಣ್ಯ ಕಾಯ್ದೆಗಳು ಬಿಗುವಿನಿಂದ ಕೂಡಿರುವ ಕಾರಣ ಆಯೋಜಕರು ಈ ಬಾರಿ ಹೆಚ್ಚು ಜಾಗೃತರಾಗಿದ್ದು, ಮೊದಲೇ ಅಗತ್ಯ ದಾಖಲೆಗಳನ್ನು ಒದಗಿಸಿದ್ದಾರೆ.

‘ರಾಯಚೂರು ಜಿಲ್ಲೆಯ ಐದು ಗ್ರಾಮ ದೇವತೆಗಳ ಟ್ರಸ್ಟ್‌ ಸಮಿತಿಯವರು ದಸರಾ ಪ್ರಯುಕ್ತ ಮೆರವಣಿಗೆಗೆ ಆನೆ ಬಳಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅಗತ್ಯ ದಾಖಲೆ ಪಡೆದು ಬೆಂಗಳೂರಿನ ಅರಣ್ಯ ಭವನಕ್ಕೆ ಕಳಿಸಲಾಗಿದೆ. ಮೊದಲೇ ಅರ್ಜಿ ಸಲ್ಲಿಸಿದ್ದ ಒಂದಕ್ಕೆ ಅನುಮತಿ ಕೊಡಲಾಗಿದೆ. ಇನ್ನೂ ನಾಲ್ಕು ಅರ್ಜಿಗಳು ಪರಿಶೀಲನೆಯಲ್ಲಿವೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಶಬಾಬು ಎಸ್. ತಿಳಿಸಿದರು.

ಸಿರವಾರ ತಾಲ್ಲೂಕಿನ ಹೀರಾ ಗ್ರಾಮದಲ್ಲಿ ಕಳೆದ ವರ್ಷ ನಡೆದಿದ್ದ ಮೆರವಣಿಗೆಯಲ್ಲಿ ಅಂಬಾರಿ ಹೊತ್ತು ಸಾಗಿದ್ದ ಹಂಪಿಯ ಸಾಕು ಆನೆ

ವಾಣಿಜ್ಯ ಬಳಕೆಗೆ ನಿಷೇಧ

ದೇಶದಲ್ಲಿ ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಮಸೂದೆ–2022 ಕಾಯ್ದೆಯಾದ ನಂತರ ಸೆರೆಹಿಡಿಯಲಾದ ಕಾಡು ಆನೆಗಳ ವಾಣಿಜ್ಯ ಬಳಕೆ ಮತ್ತು ಪ್ರದರ್ಶನಗಳಿಗೆ ಅವಕಾಶ ಇಲ್ಲ. ಆದರೆ ವಾಣಿಜ್ಯೇತರ ಉದ್ದೇಶಗಳಿಗೆ ಷರತ್ತುಬದ್ದ ಅನುಮತಿ ಕೊಡಲಾಗುತ್ತಿದೆ. ಧಾರ್ಮಿಕ ಉದ್ದೇಶಗಳಿಗಾಗಿ ಆನೆಗಳನ್ನು ಪಡೆಯಲು ನ್ಯಾಯಾಂಗ ಮಧ್ಯಸ್ಥಿಕೆ ಮತ್ತು ಕಠಿಣ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಆಯೋಜಕರು ಮೊದಲೇ ಮುಚ್ಚಳಿಕೆ ಕೊಡಬೇಕಾಗುತ್ತದೆ. ಮೆರವಣಿಗೆಗಳಲ್ಲಿ ಭಾಗವಹಿಸಲು ಅನುಮತಿಸುವ ಮೊದಲು ಆನೆಯ ಇತಿಹಾಸವನ್ನು ಪರಿಶೀಲಿಸಲಾಗುತ್ತದೆ. ಗರ್ಭಿಣಿ ಆನೆ ವಯಸ್ಸಾದ ಅಥವಾ ಗಾಯಗೊಂಡ ಆನೆಗಳನ್ನು ಉತ್ಸವದ ಆಚರಣೆಗಳಲ್ಲಿ ಬಳಸಲು ಅನುಮತಿಸುವುದಿಲ್ಲ. ಪ್ರೇಕ್ಷಕರನ್ನು ಆನೆಗಳಿಂದ ಕನಿಷ್ಠ ಮೂರು ಮೀಟರ್ ಅಂತರದಲ್ಲಿ ಇರಿಸಬೇಕು. ಮುಖ್ಯ ಮಾವುತ ಆನೆಯೊಂದಿಗೆ ಇರಬೇಕು ಎನ್ನುವ ನಿಯಮ ಪಾಲಿಸಬೇಕಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.