ADVERTISEMENT

ಜಲ ಮರುಪೂರಣಕ್ಕೆ ಕೊಡಬೇಕಿದೆ ಒತ್ತು: ಎಂ. ಹನುಮಂತಪ್ಪ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 7:17 IST
Last Updated 11 ಡಿಸೆಂಬರ್ 2025, 7:17 IST
ರಾಯಚೂರಿನ ಕೃಷಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ‘ಜಲಚರ ನಕ್ಷೆ, ಅಂತರ್ಜಲ-ಸಂಬಂಧಿತ ಸಮಸ್ಯೆಗಳು ಮತ್ತು ಅಂತರ್ಜಲ ನಿರ್ವಹಣೆ’ ಕುರಿತ ಕಾರ್ಯಾಗಾರವನ್ನು ಕುಲಪತಿ ಎಂ. ಹನುಮಂತಪ್ಪ ಉದ್ಘಾಟಿಸಿದರು. ಜೆ.ದವಿತುರಾಜ್, ಭೂ ವಿಜ್ಞಾನಿ ಅರುಣ.ಡಿ.ಇ, ಜಿ.ಕೃಷ್ಣಮೂರ್ತಿ, ಡೀನ್ ಎಂ.ಎಸ್.ಅಯ್ಯನಗೌಡರ ಉಪಸ್ಥಿತರಿದ್ದರು
ರಾಯಚೂರಿನ ಕೃಷಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ‘ಜಲಚರ ನಕ್ಷೆ, ಅಂತರ್ಜಲ-ಸಂಬಂಧಿತ ಸಮಸ್ಯೆಗಳು ಮತ್ತು ಅಂತರ್ಜಲ ನಿರ್ವಹಣೆ’ ಕುರಿತ ಕಾರ್ಯಾಗಾರವನ್ನು ಕುಲಪತಿ ಎಂ. ಹನುಮಂತಪ್ಪ ಉದ್ಘಾಟಿಸಿದರು. ಜೆ.ದವಿತುರಾಜ್, ಭೂ ವಿಜ್ಞಾನಿ ಅರುಣ.ಡಿ.ಇ, ಜಿ.ಕೃಷ್ಣಮೂರ್ತಿ, ಡೀನ್ ಎಂ.ಎಸ್.ಅಯ್ಯನಗೌಡರ ಉಪಸ್ಥಿತರಿದ್ದರು   

ರಾಯಚೂರು: ‘ಭವಿಷ್ಯದಲ್ಲಿ ಭೂಮಿ ಮೈಲ್ಮೈನಲ್ಲಿ ನೀರಿನ ಕೊರತೆಯಾಗಬಹುದು. ಹೀಗಾಗಿ ಅಂತರ್ಜಲ ಲಭ್ಯತೆ, ನೀರಿನ ಸೆಲೆಗಳು ಹಾಗೂ ಗುಣಮಟ್ಟದ ನೀರು ಮರು ಪೂರಣದ‌ ಬಗ್ಗೆ ಆಳವಾಗಿ ಅರಿತುಕೊಳ್ಳಬೇಕಿದೆ’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಅಭಿಪ್ರಾಯಪಟ್ಟರು.

ಕೇಂದ್ರ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಕೇಂದ್ರ, ಬೆಂಗಳೂರಿನ ನೈಋತ್ಯ ಪ್ರದೇಶದ ಅಂತರ್ಜಲ ಮಂಡಳಿ ಆಶ್ರಯದಲ್ಲಿ ಇಲ್ಲಿಯ ಕೃಷಿ ಎಂಜಿನಿಯರಿಂಗ್ ಕಾಲೇಜಿನ ಸಿಲ್ವರ್ ಜುಬಿಲಿ ಸೆಮಿನಾರ್ ಹಾಲ್‌ನಲ್ಲಿ ಬುಧವಾರ ಏರ್ಪಡಿಸಿದ್ದ ‘ಜಲಚರ ನಕ್ಷೆ, ಅಂತರ್ಜಲ-ಸಂಬಂಧಿತ ಸಮಸ್ಯೆಗಳು ಮತ್ತು ಅಂತರ್ಜಲ ನಿರ್ವಹಣೆ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂತರ್ಜಲ ಕುಸಿತದಿಂದ ಎದುರಾಗಿರುವ ಸಮಸ್ಯೆಯನ್ನು ನೀಗಿಸಬೇಕಿದೆ. ನೀರಿನ ಸಮರ್ಪಕ ಬಳಕೆ ಕುರಿತು ಅಧ್ಯಯನ ಮಾಡಲು ಕೃಷಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಚ್ಚಿನ ಒತ್ತು ಕೊಡುವ ಅಗತ್ಯವಿದೆ’ ಎಂದು ತಿಳಿಸಿದರು.

‘ಭವಿಷ್ಯದ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಅಧ್ಯಯನ ನಡೆಸಬೇಕು’ ಎಂದರು.

ಮುಖ್ಯ ಅತಿಥಿ ಕೇಂದ್ರ ಅಂತರ್ಜಲ ಮಂಡಳಿ ಪ್ರಾದೇಶಿಕ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ‘ಅಂತರ್ಜಲದ ಲಭ್ಯತೆ ಕುರಿತಂತೆ ಮೂರು ಹಂತದಲ್ಲಿ ಕೃಷಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕದ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಅಂತರ್ಜಲ ಲಭ್ಯತೆಯ ಕುರಿತು ಕೃಷಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು. ಅಂತರ್ಜಲ ಲಭ್ಯತೆ, ಗುಣಮಟ್ಟ ಮತ್ತು ನಿರ್ವಹಣೆ ಕುರಿತು ಮಾಹಿತಿ ನೀಡಲಾಗುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು’ ಹೇಳಿದರು.

ಕೃಷಿ ಎಂಜಿನಿಯರಿಂಗ್‌ ಕಾಲೇಜಿನ ಡೀನ್ ಎಂ.ಎಸ್.ಅಯ್ಯನಗೌಡರ, ಕೇಂದ್ರ ಅಂತರ್ಜಲ ಮಂಡಳಿ ನಿರ್ದೇಶಕ ಡಾ.ಜೆ.ದವಿತುರಾಜ್, ಹಿರಿಯ ಭೂ ವಿಜ್ಞಾನಿ ಅರುಣ.ಡಿ.ಇ, ಜಿ.ಕೃಷ್ಣಮೂರ್ತಿ, ಕೃಷಿ ಎಂಜಿನಿಯರಿಂಗ್ ಕಾಲೆಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.