ADVERTISEMENT

ಜಾಲಹಳ್ಳಿ: ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಕಡಿಮೆ ಕೂಲಿ!

ಅಧಿಕಾರಿಗಳಿಂದಲೇ ನರೇಗಾ ಯೋಜನೆ ವಿಫಲಗೊಳಿಸುವ ಹುನ್ನಾರ: ಆರೋಪ

ಅಲಿಬಾಬಾ ಪಟೇಲ್
Published 29 ಏಪ್ರಿಲ್ 2022, 19:30 IST
Last Updated 29 ಏಪ್ರಿಲ್ 2022, 19:30 IST
ಜಾಲಹಳ್ಳಿಗೆ ಸಮೀಪದ ಕಮಲದಿನ್ನಿ ಗ್ರಾಮದಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ತಾ.ಪಂ ಎ.ಡಿ ಬಸಣ್ಣ ನಾಯಕ ಭೇಟಿ ನೀಡಿ ಪರಿಶೀಲಿಸಿದರು
ಜಾಲಹಳ್ಳಿಗೆ ಸಮೀಪದ ಕಮಲದಿನ್ನಿ ಗ್ರಾಮದಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ತಾ.ಪಂ ಎ.ಡಿ ಬಸಣ್ಣ ನಾಯಕ ಭೇಟಿ ನೀಡಿ ಪರಿಶೀಲಿಸಿದರು   

ಜಾಲಹಳ್ಳಿ: ಉದ್ಯೋಗ ಖಾತ್ರಿ ಯೋಜನೆ ಅಡಿ ಕೂಲಿ ಕಾರ್ಮಿಕರಿಗೆ ದಿನಕ್ಕೆ ₹ 309 ಕೂಲಿ ನಿಗದಿ ಪಡಿಸಲಾಗಿದೆ. ಆದರೆ ಸಮೀಪದ ಗಾಣಧಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮಲದಿನ್ನಿ ಗ್ರಾಮದಲ್ಲಿ ಯೋಜನೆ ಅಡಿ ಕೂಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಡಿಮೆ ಕೂಲಿಯನ್ನು ನೀಡಲಾಗುತ್ತಿದೆ.

ನಿತ್ಯ 200ಕ್ಕೂ ಜನ ಕೂಲಿ ಕಾರ್ಮಿಕರು ನಾಲ್ಕೂ ತಂಡಗಳಾಗಿ ಕೆಲಸ ಮಾಡಿದ್ದಾರೆ. ಪ್ರತಿ ಕೂಲಿ ಕಾರ್ಮಿಕನಿಗೆ ಸರ್ಕಾರ ನಿಗದಿ ಪಡಿಸಿದ ಕೂಲಿ ನೀಡದೇ ಅಧಿಕಾರಿಗಳು ₹ 140 ಕೂಲಿ ಪಾವತಿಸುವುದಾಗಿ ತಿಳಿಸಿದ್ದಾರೆ.

ಇದರಿಂದ ಈ ಯೋಜನೆ ಅಡಿ ಕೆಲಸಕ್ಕೆ ಬರುವ ಜನರನ್ನು ಉದ್ದೇಶ ಪೂರ್ವಕವಾಗಿ ಬರದಂತೆ ಮಾಡಿ ಯೋಜನೆಯನ್ನು ವಿಫಲಗೊಳಿಸುವ ಹುನ್ನಾರ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಯೋಜನೆಯಲ್ಲಿ ಕೆಲಸ ಮಾಡುವ ಗುಂಪಿನ ಮೇಟಿಗಳಾದ ಹನುಮಂತ, ಸಿದ್ದನಗೌಡ, ನಿಂಗಯ್ಯ, ಅಬ್ರಾಂ ಅವರು ಆರೋಪಿಸಿದ್ದಾರೆ.

ADVERTISEMENT

ಕಮಲದಿನ್ನಿ ಗ್ರಾಮದ ಹತ್ತಿರದ ಚೀಗರಿ ಮರಡಿಯಲ್ಲಿ (ಗುಡ್ಡ) ಟ್ರಾಂಚ್ ನಿರ್ಮಾಣ ಮಾಡುವ ಕೆಲಸ ನೀಡಿದ್ದಾರೆ. ಒಬ್ಬ ಕಾರ್ಮಿಕ ನಿತ್ಯ 3 ಅಡಿ ಆಳ, 3 ಅಡಿ ಅಗಲ, 3 ಅಡಿ ಉದ್ದ ಗುಡ್ಡದಲ್ಲಿ ಗುಂಡಿ ಅಗೆಯಬೇಕು. ಇದು ಒಂದು ಕ್ವಿಬಿಕ್ ಮೀಟರ್ ಅಗುತ್ತೆ. ಇದನ್ನು ಕಾರ್ಮಿಕರು ಮಾಡಿದ್ದಾರೆ.

ಆದರೆ, ಅಧಿಕಾರಿಗಳು, ‘ಕೂಲಿ ಕಾರ್ಮಿಕರು ಕಡಿಮೆ ಕೆಲಸ ಮಾಡಿದ್ದಾರೆ. ಗುಂಡಿಯು ಅಳತೆಗೆ ಬರುತ್ತಿಲ್ಲ’ ಎಂದು ಹೇಳುತ್ತಿದ್ದಾರೆ.

ಕೆಲವು ವಿದ್ಯಾವಂತಹ ನಿರುದ್ಯೋಗಿ ಯುವಕರು ತಾವು ಯೋಜನೆ ಅಡಿ ಕೆಲಸ ಮಾಡಲು ಗುಂಪು ರಚಿಸಿಕೊಂಡು ಕೆಲಸಕ್ಕೆ ಹೋದರೆ. ಕಡಿಮೆ ಕೂಲಿ ನೀಡಿ ಅವರ ಹಿಂದೆ ಜನ ಹೋಗದಂತೆ ತಡೆಯಬೇಕೆನ್ನುವ ಉದ್ದೇಶದಿಂದ ಈ ತರಹ ಕಡಿಮೆ ಕೂಲಿ ಪಾವತಿಸುವ ಬಗ್ಗೆ ಹೇಳುತ್ತಿದ್ದಾರೆ ಎಂದು ಕಾರ್ಮಿಕರು ದೂರಿದರು.

ಅಲ್ಲದೇ ಯೋಜನೆ ಅಡಿ ನೀಡಬೇಕಾದ ಕುಡಿಯುವ ನೀರು, ನೆರಳು, ವಾಹನ ಈ ಯಾವ ಸೌಲಭ್ಯವನ್ನೂ ಕಾರ್ಮಿಕರಿಗೆ ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ಅವರು ಉತ್ತರಿಸದೇ ಹೋರಟು ಹೋಗುತ್ತಾರೆ ಎಂದು ಕಾರ್ಮಿಕರು ದೂರುತ್ತಾರೆ.

ಇದೇ ಯೋಜನೆ ಅಡಿ ₹ 8 ಲಕ್ಷವನ್ನು ನಾಲ್ಕು ಭಾಗ ಮಾಡಿ‌ ತಲಾ ₹ 2 ಲಕ್ಷದಂತೆ ಕಮಲದಿನ್ನಿ ಕೆರೆ ಹೂಳು ಎತ್ತುವ ಕಾಮಗಾರಿ ಮಾಡಲಾಗಿದೆ ಎಂದು ಹಣ ಪಾವತಿಸಿದ್ದಾರೆ. ಆದರೆ, ಅ ಸ್ಥಳದಲ್ಲಿ ಯಾವುದೇ ಕಾಮಗಾರಿ ನಡೆದೇ ಇಲ್ಲ. ಒಬ್ಬ ಕೂಲಿ ಕಾರ್ಮಿಕ ಕೆಲಸ ಮಾಡಿಲ್ಲ. ಆದರೂ ಹಣ ಕಾರ್ಮಿಕರ ಖಾತೆಗೆ ಜಮೆ ಮಾಡಿ ನಂತರ ಅವರಿಂದ ವಸೂಲಿ ಮಾಡಿಕೊಂಡಿದ್ದಾರೆ ಎಂದು ಅವರು ದೂರಿದರು.

‘ನಾವು ಮಾಡಿದ ಕೆಲಸಕ್ಕೆ ಸರಿಯಾದ ಕೂಲಿ ಪಾವತಿಸಿ ಎಂದು ಅಧಿಕಾರಿಗಳನ್ನು ಕೇಳಿದರೆ, ನಮಗೇ ಜೋರು ಮಾಡಿ, ಕಡಿಮೆ ಕೂಲಿ ಪಾವತಿಸುವುದಾಗಿ ಹೇಳಿ ಹೋಗುತ್ತಾರೆ’ ಎಂದು ಕಾರ್ಮಿಕರು ಆರೋಪಿಸುತ್ತಾರೆ.

‘ಕೂಲಿ ಕಾರ್ಮಿಕರಿಗೆ ಸರಿಯಾದ ಕೂಲಿ ಪಾವತಿಸದೇ, ನರೇಗಾ ಯೋಜನೆಯ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಅಧಿಕಾರಿಗಳನ್ನು ತಕ್ಷಣವೇ ವಿಚಾರಣೆ ನಡೆಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ನೋಂದ ಕಾರ್ಮಿಕರು ಒತ್ತಾಯಿಸಿದ್ದಾರೆ.

ಕೆಲಸದಂತೆ ಕೂಲಿ ಪಾವತಿ
‘ಖಾತ್ರಿ ಯೋಜನೆಯಡಿ ಕೂಲಿ ಮಾಡುವ ಪ್ರತಿ ಕಾರ್ಮಿಕನಿಗೆ ದಿನಕ್ಕೆ ₹ 309 ಕೂಲಿ ನಿಗದಿ ಮಾಡಲಾಗಿದೆ. ಆದರೆ, ಒಬ್ಬ ಮನಷ್ಯ ದಿನಕ್ಕೆ ಒಂದು ಕ್ವಿಬಿಕ್ ಮೀಟರ್ ಗುಂಡಿ ತೆಗೆಯುವ ಕೆಲಸ ಮಾಡಿದರೆ ಮಾತ್ರ ನೀಡಲಾಗುವುದು. ಆದರೆ, ಕಮಲದಿನ್ನಿ ಗ್ರಾಮದಲ್ಲಿ ಕಾರ್ಮಿಕರು ಕಡಿಮೆ ಕೆಲಸ ಮಾಡಿರುವುದರಿಂದ ಅವರಿಗೆ ದಿನಕ್ಕೆ ₹ 140 ಕೂಲಿ ಪಾವತಿಸಲಾಗಿದೆ’ ಎಂದು ನರೇಗಾ ಯೋಜನೆಯ ಕಿರಿಯ ಎಂಜಿನಿಯರ್‌ ಅಬ್ದುಲ್ ಸಮದ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.