ಮಾನ್ವಿ: ‘ಪಟ್ಟಣದ ಬಸವ ವೃತ್ತದ ಬಳಿ ಹಳೆ ಸಾರಿಗೆ ಬಸ್ ಡಿಪೋ ಇದ್ದ ಸ್ಥಳದಲ್ಲಿ ₹9.5ಕೋಟಿ ವೆಚ್ಚದಲ್ಲಿ ಎಕ್ಸ್‌ಪ್ರೆಸ್ ಬಸ್ ನಿಲ್ದಾಣ ನಿರ್ಮಿಸಲಾಗುವುದು’ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಗುರುವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹5ಕೋಟಿ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ₹4.5ಕೋಟಿ ಅನುದಾನದಲ್ಲಿ ಎಕ್ಸ್‌ಪ್ರೆಸ್ ಬಸ್ ನಿಲ್ದಾಣ ನಿರ್ಮಿಸಲಾಗುವುದು. ₹15 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಲಾಗುವುದು. ಕಲ್ಮಲಾದಿಂದ ಸಿಂಧನೂರುವರೆಗೆ ರಾಜ್ಯ ಹೆದ್ದಾರಿಯ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು’ ಎಂದು ತಿಳಿಸಿದರು.
‘ಪುರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರು ನಗರೋತ್ಥಾನ ಯೋಜನೆಯ ಅನುದಾನ, 15ನೇ ಹಣಕಾಸು ಯೋಜನೆ ಹಾಗೂ ಕೆಕೆಆರ್‌ಡಿಬಿ ಅನುದಾನ ಬಳಸಿಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕು. ಪಟ್ಟಣದ 27ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಮತ್ತು ಇತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಾನು ಹಾಗೂ ಶಾಸಕ ಜಿ.ಹಂಪಯ್ಯ ನಾಯಕ, ಕೆಕೆಆರ್‌ಡಿಬಿ ಅನುದಾನದಲ್ಲಿ ತಲಾ ₹5ಕೋಟಿ ಅನುದಾನವನ್ನು ಪುರಸಭೆಗೆ ನೀಡುತ್ತೇವೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಮುಖಂಡರಾದ ಎ.ಬಾಲಸ್ವಾಮಿ ಕೊಡ್ಲಿ, ಬಿ.ಕೆ.ಅಮರೇಶಪ್ಪ, ರೌಡೂರು ಮಹಾಂತೇಶ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.